ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ದೇಶದ ಮೊದಲ ಭಯೋತ್ಪಾದಕ: ಕಾಂಗ್ರೆಸ್ ವಕ್ತಾರ ಡಿ. ಬಸವರಾಜ್

Update: 2018-07-23 17:14 GMT

ದಾವಣಗೆರೆ, ಜು.23: ‘‘ಪುಕ್ಕಟೆ ಉಪವಾಸ ಕೂತವರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ ಎಂಬುದಾಗಿ ಹೇಳಿಕೆ ನೀಡಿ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು ಅಪಮಾನಿಸಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವ ಅನಂತ ಕುಮಾರ್ ಹೆಗಡೆ, ದೇಶದ ಮೊದಲ ಭಯೋತ್ಪಾದಕ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ವಕ್ತಾರ ಡಿ. ಬಸವರಾಜ್ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ನಡೆದ ನಮೋ ಭಾರತ್ ಸಂಘಟನೆಯ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ದೇಶಕ್ಕೆ ಉಪವಾಸ ಕೂತವರಿಂದ ಸ್ವಾತಂತ್ರ್ಯ ಬಂದಿಲ್ಲ ಹಾಗೂ ಸರಕಾರಿ ಕಚೇರಿಗಳಲ್ಲಿ ಹಾಕಿರುವ ಮೂರು ಫೋಟೊದಲ್ಲಿರುವವರು ಸ್ವಾತಂತ್ರ್ಯಕ್ಕಾಗಿ ಏನೂ ಮಾಡಿಲ್ಲ ಎಂಬುದಾಗಿ ಹೇಳಿಕೆ ನೀಡುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮೌಲಾನಾ ಅಬ್ದುಲ್ ಕಲಾಂ ಅಝಾದ್ ಅವರು ಸೇರಿದಂತೆ ಸ್ವಾತಂತ್ರ್ಯಕ್ಕಾಗಿ, ಅಹಿಂಸಾತ್ಮಕ ಹೋರಾಟ ನಡೆಸಿ, ತ್ಯಾಗ ಬಲಿದಾನ ಮಾಡಿದ ಅಸಂಖ್ಯಾತ ಕಾಂಗ್ರೆಸ್ ನಾಯಕರಿಗೆ ಅವರು ಅಪಮಾನ ಮಾಡಿದ್ದಾರೆ. ಸಚಿವ ಅನಂತಕುಮಾರ ಹೆಗಡೆ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಸಂತತಿಗೆ ಸೇರಿದವರು ಎಂದು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರಾಷ್ಟ್ರದ ಕೋಟ್ಯಂತರ ಜನತೆ ಹೋರಾಟ ಮಾಡಿದ್ದಾರೆಯೇ ಹೊರತು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಯಾರೊಬ್ಬರೂ ಹೋರಾಟ ಮಾಡಿಲ್ಲ. ಆರೆಸ್ಸೆಸ್‌ನವರು ಬ್ರಿಟಿಷರೊಂದಿಗೆ ಶಾಮೀಲಾಗಿ, ನಿಜವಾದ ದೇಶಪ್ರೆಮಿಗಳ ಬಗ್ಗೆ ಬ್ರಿಟೀಷರಿಗೆ ಗುಪ್ತ ಮಾಹಿತಿ ನೀಡುವ ಏಜೆಂಟರಾಗಿ, ಬ್ರಿಟೀಷರಿಂದ ಅಧಿಕಾರವನ್ನೂ ಅನುಭವಿಸಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಟೀಕಿಸುವ ವ್ಯಕ್ತಿಯನ್ನು ಸಂಪುಟದಲ್ಲಿ ಇಟ್ಟುಕೊಳ್ಳುವ ಮೂಲಕ ಗಾಂಧಿ ವಿರೋಧಿ ಆಡಳಿತ ನೀಡುತ್ತಿದ್ದಾರೆಂದು ಡಿ. ಬಸವರಾಜ್ ತೀವ್ರ ವಾಗ್ದಾಳಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News