ಶಿವಮೊಗ್ಗ: ವಿಷದ ಬಾಟಲಿ, ಹಗ್ಗದೊಂದಿಗೆ ಸರ್ಕಾರಿ ಕಚೇರಿಗೆ ಆಗಮಿಸಿದ ಮುಳುಗಡೆ ಸಂತ್ರಸ್ತರು
ಶಿವಮೊಗ್ಗ, ಜು. 23: ಜಲ ವಿದ್ಯುತ್ ಯೋಜನೆಗೆ ಮನೆಮಠ, ಜಮೀನು ಕಳೆದುಕೊಂಡು ಸಂತ್ರಸ್ತರಾದ ರೈತರು ಸೋಮವಾರ ವಿಷದ ಬಾಟಲಿ, ಹಗ್ಗದೊಂದಿಗೆ ಸರ್ಕಾರಿ ಕಚೇರಿಗೆ ದೌಡಾಯಿಸಿದ್ದರು. ತಮಗೆ ಸರ್ಕಾರದಿಂದ ಮಂಜೂರಾದ ಜಮೀನನ್ನು ಪ್ರಭಾವಿ ಜಾತಿಗಳಿಗೆ ಮೀಸಲಿಟ್ಟಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಕಚೇರಿಯಲ್ಲಿಯೇ ವಿಷ ಸೇವಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಸ್ಪಷ್ಟ ಭರವಸೆ ಸಿಗದವರೆಗೆ ಕಚೇರಿ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದು, ಕುಳಿತುಕೊಂಡರು.
ಇದು, ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸರ್ವೇ - ಭೂ ದಾಖಲೆಗಳ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದ ಘಟನೆ. ಸಂತ್ರಸ್ತರ ಈ ಬೆದರಿಕೆಗೆ ಕಚೇರಿಯಲ್ಲಿದ್ದ ಅಧಿಕಾರಿ - ಸಿಬ್ಬಂದಿಗಳು ಕ್ಷಣಕಾಲ ಹೌಹಾರುವಂತಾಯಿತು. ಅವರ ಮನವೊಲಿಕೆಗೆ ನಡೆಸಿದ ಯತ್ನಗಳು ಫಲ ನೀಡಲಿಲ್ಲ. ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯ ಪೊಲೀಸರು ಕೂಡ ಕಚೇರಿಗೆ ಆಗಮಿಸಿದರು. ಹಿರಿಯ ಅಧಿಕಾರಿಗಳು ಆಗಮಿಸಿ ಸೂಕ್ತ ನ್ಯಾಯ ಕಲ್ಪಿಸುವ ಭರವಸೆ ನೀಡಿದರು. ಅಂತಿಮವಾಗಿ ಸಂತ್ರಸ್ತರು ಸರ್ಕಾರಿ ಕಚೇರಿಯಿಂದ ಹಿಂದಿರುಗಿದರು.
ಆರೋಪವೇನು?: ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ಶರಾವತಿ ನದಿಗೆ ಚಕ್ರಾ - ಸಾವೇಹಕ್ಲು ಬಳಿ ಡ್ಯಾಂ ನಿರ್ಮಾಣ ಮಾಡಲಾಗಿತ್ತು. ಈ ವೇಳೆ ಹಲವು ಗ್ರಾಮಗಳ ಜನವಸತಿ ಹಾಗೂ ಕೃಷಿ ಜಮೀನು ಮುಳುಗಡೆಯಾಗಿತ್ತು. ಮುಳುಗಡೆ ಸಂತ್ರಸ್ತರಿಗೆ ಹಲವೆಡೆ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿತ್ತು. ಇದರಲ್ಲಿ ಸುಮಾರು 263 ರೈತರಿಗೆ 1978 ರಲ್ಲಿ ಶಿವಮೊಗ್ಗ ತಾಲೂಕಿನ ಅಗಸವಳ್ಳಿ ಗ್ರಾಮದ ಸರ್ವೇ ನಂಬರ್ 167 ರಲ್ಲಿ 504 ಎರಕೆ ಕೃಷಿ ಜಮೀನು ಮಂಜೂರು ಮಾಡಲಾಗಿತ್ತು. ಸಂತ್ರಸ್ತರಿಗೆ ಜಮೀನು ಹಂಚಿಕೆ ಮಾಡಿ, ಪಹಣಿ ಕೂಡ ನೀಡಲಾಗಿತ್ತು. ಸಂತ್ರಸ್ತರು ಈ ಜಮೀನಿನಲ್ಲಿ ಕೃಷಿ ಉಳುಮೆ ಮಾಡಿಕೊಂಡು ಬರುತ್ತಿದ್ದರು.
'ಈ ನಡುವೆ 2012-13 ರಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಕುರುಬರ ಸಂಘಕ್ಕೆ ಸಂತ್ರಸ್ತರಿಗೆ ಮೀಸಲಿರಿಸಲಾಗಿದ್ದ, ಖಾತೆ ಮಾಡಿಕೊಡಲಾಗಿದ್ದ ಜಮೀನಲ್ಲಿ ತಲಾ 25 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕೆಂದು ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಿಕೊಡಲಾಗಿತ್ತು. ಈ ಕುರಿತಂತೆ ಸಂತ್ರಸ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜಿಲ್ಲಾಡಳಿತಕ್ಕೆ, ಕಾನೂನು ಸಚಿವರಿಗೆ ದೂರು ಕೂಡ ನೀಡಲಾಗಿತ್ತು. ಈ ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ, ಪರಿಶೀಲನೆ ಕೂಡ ನಡೆಸಲಾಗಿತ್ತು. ಉಪ ವಿಭಾಗಾಧಿಕಾರಿಗಳು ನೀಡಿದ ವರದಿಯಲ್ಲಿ, ಮುಳುಗಡೆ ಸಂತ್ರಸ್ತರಿಗೆ ಮೀಸಲಿಟ್ಟ ಜಮೀನು ಜಾತಿ ಸಂಘಗಳಿಗೆ ಮಂಜೂರುಗೊಳಿಸಿರುವುದನ್ನು ಸ್ಪಷ್ಟವಾಗಿ ಹೇಳಲಾಗಿತ್ತು. ಮಂಜೂರಾತಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುವುದು, ಸಂತ್ರಸ್ತರಿಗೆ ಪೋಡಿ ಮಾಡಿಕೊಟ್ಟಿದ್ದ ಜಮೀನು ಸೇರಿಸಿ, ನಕ್ಷೆ ತಯಾರಿಸಿ, ನಕಲಿ ದಾಖಲೆ ಸೃಷ್ಟಿಸಿ ಮಂಜೂರಾತಿಗೊಳಿಸಿರುವುದು ಬೆಳಕಿಗೆ ಬಂದಿತ್ತು' ಎಂದು ಚಕ್ರಾ - ಸಾವೇಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯರವರು ಮಾಹಿತಿ ನೀಡುತ್ತಾರೆ.
ಕಾನೂನುಬಾಹಿರ: 2001 ರಲ್ಲಿ ತಾಲೂಕು ಭೂ ಮಂಜೂರಾತಿ ವಿಭಾಗದ ಸಭೆಯಲ್ಲಿ ಅಗಸವಳ್ಳಿ ಗ್ರಾಮದ ಸರ್ವೇ ನಂಬರ್ 167 ರಲ್ಲಿ ಶರವಾತಿ, ಚಕ್ರಾ, ಸಾವೇಹಕ್ಲು ಯೋಜನೆಯ ಸಂತ್ರಸ್ತರಿಗೆ ವಿನಹಃ ಬೇರೆ ಯಾರಿಗೂ ಮಂಜೂರಾತಿಗೆ ಅವಕಾಶವಿರುವುದಿಲ್ಲ. ಹಾಗೂ ಈ ಗ್ರಾಮವು ಪಟ್ಟಣದಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಬರುವುದರಿಂದ ಬಗರ್‍ಹುಕುಂ ಅಥವಾ ಯಾವುದೇ ಮಂಜೂರಾತಿಗೆ ಅವಕಾಶವಿರುವುದಿಲ್ಲ ಎಂದು ನಿರ್ಣಯ ಅಂಗೀಕರಿಸಲಾಗಿದೆ. ಹೀಗಿದ್ದರೂ ಕೂಡ ಮೃತಪಟ್ಟ ಸಂತ್ರಸ್ತರ ಹೆಸರಿನಲ್ಲಿ ಸಾಕಷ್ಟು ನಕಲಿ ದಾಖಲೆ ಸೃಷ್ಟಿಸಿ, ಸತ್ತವರ ಹೆಸರಿನಲ್ಲಿ ಸಹಿ ಮಾಡಿಸಿ, ಸಂಘಗಳಿಗೆ ಮಂಜೂರಾತಿ ಮಾಡಿರುವಂತದ್ದು ಕಾನೂನು ಬಾಹಿರ ಕೃತ್ಯವಾಗಿರುತ್ತದೆ. ಪ್ರಕರಣದ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನಿಖೆ ನಡೆಸಲು ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೂಡ ನೀಡಿದ್ದಾರೆ ಎಂದು ಸುಬ್ರಹ್ಮಣ್ಯರವರು ಹೇಳುತ್ತಾರೆ.
ಉಲ್ಲಂಘನೆ: ಪ್ರಸ್ತುತ ಈ ವಿವಾದ ನ್ಯಾಯಾಲಯದಲ್ಲಿದೆ. ಇಂತಹ ವೇಳೆ ಯಾವುದೇ ಪೋಡಿ ಪ್ರಕ್ರಿಯೆ ನಡೆಸಲು ಬರುವುದಿಲ್ಲ. 20-1-2018 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಜಮೀನು ಪೋಡಿ ಮಾಡಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದರೆ 21-7-2018 ರಂದು ಸಂತ್ರಸ್ತರ ಖಾತೆ ಜಮೀನಿಗೆ ಅಕ್ರಮವಾಗಿ ತಾಲೂಕು ಸರ್ವೇಯರ್ ಹಾಗೂ ಸದರಿ ಸಂಘದವರು ಪ್ರವೇಶಿಸಿ, ಪೋಡಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇದಕ್ಕೆ ನಾವು ತಡೆವೊಡ್ಡಿದ ಕಾರಣದಿಂದ, ಅರ್ಧಕ್ಕೆ ಪೋಡಿ ಕಾರ್ಯ ಸ್ಥಗಿತಗೊಳಿಸಿ ಅಧಿಕಾರಿಗಳು ಹಿಂದಿರುಗಿದ್ದಾರೆ ಎಂದು ಸುಬ್ರಹ್ಮಣ್ಯ ಮಾಹಿತಿ ನೀಡುತ್ತಾರೆ.
ಸತ್ತವರ ಹೆಸರಿನಲ್ಲಿಯೂ ಸೃಷ್ಟಿಯಾಗಿದೆ ನಕಲಿ ದಾಖಲೆ: ಅಧ್ಯಕ್ಷ ಸುಬ್ರಹ್ಮಣ್ಯ ಆರೋಪ
'ಸಂತ್ರಸ್ತರ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಜಾತಿ ಸಂಘಗಳಿಗೆ ಕಾನೂನುಬಾಹಿರವಾಗಿ ಮಂಜೂರುಗೊಳಿಸಲಾಗಿದೆ. ಮೃತಪಟ್ಟ ಸಂತ್ರಸ್ತರ ಹೆಸರಿನಲ್ಲಿ ಸಾಕಷ್ಟು ನಕಲಿ ದಾಖಲೆ ಸೃಷ್ಟಿಸಿ, ಸತ್ತವರ ಹೆಸರಿನಲ್ಲಿ ಸಹಿ ಮಾಡಿಸಿ, ಸಂಘಗಳಿಗೆ ಮಂಜೂರಾತಿಗೊಳಿಸಲಾಗಿದೆ. ನಾಡಿಗೆ ಬೆಳಕು ನೀಡಲು ಮನೆ -ಮಠ, ಜಮೀನು ಸೇರಿದಂತೆ ಸರ್ವಸ್ವ ಕಳೆದುಕೊಂಡು ಬೀದಿಪಾಲಾದ ಸಂತ್ರಸ್ತರಿಗೆ ದ್ರೋಹ ಬಗೆಯುವ ಕೆಲಸ ನಡೆಸಲಾಗಿದೆ. ಈ ಅನ್ಯಾಯದ ವಿರುದ್ಧ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಅಧಿಕಾರಿಗಳು ಕೂಡ ಅಕ್ರಮ ನಡೆದಿದೆ ಎಂದು ಹೇಳುತ್ತಾರೆ. ಆದಾಗ್ಯೂ ಸಂಘಗಳಿಗೆ ಜಮೀನು ಮಂಜೂರಾತಿಗೆ ಒಳಗೊಳಗೆ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಈ ಕಾರಣದಿಂದ ಸೋಮವಾರ ಸಂತ್ರಸ್ತರು ವಿಷದ ಬಾಟಲಿ ಹಾಗೂ ಹಗ್ಗದೊಂದಿಗೆ ಸರ್ಕಾರಿ ಕಚೇರಿಗಳಿಗೆ ಆಗಮಿಸಿದ್ದೇವೆ. ನಮಗೆ ನ್ಯಾಯ ಸಿಗದಿದ್ದರೆ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ' ಎಂದು ಚಕ್ರಾ - ಸಾವೇಹಕ್ಲು ಮುಳುಗಡೆ ಸಂತ್ರಸ್ತ ಪುನರ್ವಸತಿ ಹೋರಾಟ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ತಿಳಿಸುತ್ತಾರೆ.
ತನಿಖೆಗೆ ಆದೇಶಿಸಿದ್ದ ಮುಖ್ಯ ಕಾರ್ಯದರ್ಶಿ
ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿದ್ದ ಭೂಮಿಯನ್ನು ಜಾತಿ ಸಂಘಗಳಿಗೆ ಕಾನೂನುಬಾಹಿರವಾಗಿ ಮಂಜೂರಾತಿ ನೀಡಿದ್ದ ಪ್ರಕರಣದ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ತನಿಖೆ ನಡೆಸಲು ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೂಡ ನೀಡಿದ್ದಾರೆ. ಹಾಗೆಯೇ ಪ್ರಸ್ತುತ ಈ ವಿವಾದ ನ್ಯಾಯಾಲಯದಲ್ಲಿದೆ. ಇಂತಹ ವೇಳೆ ಯಾವುದೇ ಪೋಡಿ ಪ್ರಕ್ರಿಯೆ ನಡೆಸಲು ಬರುವುದಿಲ್ಲ. 20-1-2018 ರಂದು ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಜಮೀನು ಪೋಡಿ ಮಾಡಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಂತ್ರಸ್ತರು ಮಾಹಿತಿ ನೀಡುತ್ತಾರೆ.