ಸಾಲಮನ್ನಾ ಕುರಿತು ಸ್ಪಷ್ಟ ಸರಕಾರಿ ಆದೇಶದ ಅಗತ್ಯವಿದೆ: ಮಾಜಿ ಸಚಿವ ಟಿ.ಬಿ ಜಯಚಂದ್ರ

Update: 2018-07-23 17:34 GMT

ತುಮಕೂರು,ಜು.23: ಸರಕಾರದ ಸಾಲಮನ್ನಾ ಕುರಿತು ರೈತರು ಮತ್ತು ಬ್ಯಾಂಕುಗಳ ನಡುವೆ ಎದ್ದಿರುವ ಗೊಂದಲಕ್ಕೆ ತೆರೆ ಎಳೆಯಲು ಸಾಲಮನ್ನಾ ಕುರಿತು ಸ್ಪಷ್ಟ ಸರಕಾರಿ ಆದೇಶ ಹೊರಡಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತುಮಕೂರು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು 44 ಸಾವಿರ ಕೋಟಿ ರೂ ಸಾಲಮನ್ನಾವನ್ನು ಬಜೆಟ್‍ನಲ್ಲಿ ಪ್ರಕಟಿಸುವ ಮೂಲಕ ಅಸಾಧಾರಣವಾದುದ್ದನ್ನು ಸಾಧಿಸಲು ಹೊರಟಿದ್ದಾರೆ. ಸಂಪನ್ಮೂಲ ಕ್ರೋಢೀಕರಣದಲ್ಲಿಯೂ ತೊಡಗಿದೆ. ಮೊದಲ ಕಂತಾಗಿ ಈ ಹಿಂದಿನ ಸರಕಾರದ 4000 ಕೋಟಿ ಜೊತೆಗೆ, ಹೊಸ ಸಾಲ 6000 ಕೋಟಿ ಸೇರಿ, 10 ಸಾವಿರ ಕೋಟಿ ರೂ ಮನ್ನಾ ಮಾಡಬೇಕಾಗಿದೆ. ಆದರೆ ಈ ಬಗ್ಗೆ ಸ್ಪಷ್ಟ ಆದೇಶವಿಲ್ಲ. ಆದ್ದರಿಂದ ರೈತರು ಮತ್ತು ಬ್ಯಾಂಕರ್ಸ್ ನಡುವೆ ಗೊಂದಲವಿದೆ. ಇದನ್ನು ಬಗೆಹರಿಸಲು ನಿರ್ದಿಷ್ಟ ಆದೇಶದ ಅಗತ್ಯವಿದೆ ಎಂದರು.

ಸಾಲಮನ್ನಾ ಎಂದಾಗ ರೈತರು ಮತ್ತು ಬ್ಯಾಂಕರ್ಸ್ ಇಬ್ಬರೂ ಸ್ವಾಗತಿಸುತ್ತಾರೆ. ಬ್ಯಾಂಕುಗಳಿಗೆ ವಸೂಲಿ ಮಾಡುವ ಪ್ರಮಯವೇ ಇಲ್ಲದಂತಾಗುತ್ತಿದೆ. ಆದರೆ ಹೊಸ ಸಾಲ ನೀಡಲು ಸಂಪನ್ಮೂಲದ ಕೊರತೆ ಎದುರಾಗುತ್ತದೆ. ಹಣದ ಅರಿವು ಇಲ್ಲದೇ ಹೋದರೆ ಬ್ಯಾಂಕ್ ವ್ಯವಹಾರಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಆಲೋಚನೆ ನಡೆಸಿ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕಿದೆ ಎಂದು ಜಯಚಂದ್ರ ನುಡಿದರು.

ರಾಜ್ಯದಲ್ಲಿ ಇರುವ ಇರುವ ಜೆಡಿಎಸ್-ಕಾಂಗ್ರೆಸ್ ನಡುವಿನ ಮೈತ್ರಿ ಮುಂದಿನ ಸ್ಥಳೀಯ ಸಂಸ್ಥೆ ಹಾಗೂ ಲೋಕಸಭಾ ಚುನಾವಣೆಯವರೆಗೆ ಮುಂದುವರೆಯಬೇಕೇ, ಬೇಡವೆ ಎಂಬುದರ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತೀರ್ಮಾನ ಕೈಗೊಳ್ಳಲಿದ್ದಾರೆ. ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಮುಂದಿನ ಲೋಕಸಭಾ ಚುನಾವಣೆ ಎದುರಿಸಬೇಕು ಎಂಬುದು ಎಐಸಿಸಿ ಅಧ್ಯಕ್ಷರ ಇಚ್ಚೆಯಾಗಿದೆ. ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ. 2019ರ ಲೋಕಸಭಾ ಚುನಾವಣೆ ಎಲ್ಲರಿಗೂ ಪ್ರತಿಷ್ಠೆಯ ಕಣವಾಗಿದೆ. ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮೇಲಿರುವ ಗುರುತರ ಜವಾಬ್ದಾರಿಯಾಗಿದೆ ಎಂದರು.

ಎಐಸಿಸಿ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಕೆ.ಹೆಚ್.ಮುನಿಯಪ್ಪ ಅವರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ. ಅವರ ಅನುಭವ ಪಕ್ಷದ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಟಿ.ಬಿ.ಜಯಚಂದ್ರ ನುಡಿದರು.

ತುಮಕೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಹೇಮಾವತಿ ನೀರು ಹರಿಸುವ ಸಂಬಂಧ ಸರಕಾರ ಕೂಡಲೇ ಐಸಿಸಿ ಮೀಟಿಂಗ್ ನಡೆಸುವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೇಮಕವಾಗದ ಹಿನ್ನೆಲೆಯಲ್ಲಿ ಹೇಮಾವತಿ ಅಧಿಕಾರಿಗಳೇ ಸಭೆ ನಡೆಸಿ, ಎಷ್ಟು ದಿನ ನಾಲೆಯಲ್ಲಿ ನೀರು ಹರಿಸಲಾಗುತ್ತದೆ ಎಂಬ ಮಾಹಿತಿ ನೀಡಿದರೆ, ರೈತರು ನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ನಿರ್ಧಾರ ಮಾಡಲು ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News