ಮಂಡ್ಯ: ಮೂರ್ತಿ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಒತ್ತಾಯಿಸಿ ಸಿಎಂಗೆ ದೂರು

Update: 2018-07-23 17:39 GMT

ಮಂಡ್ಯ, ಜು.23: ಕಳೆದ ಜು.13ರಂದು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ನಡೆದ ಮದ್ದೂರು ತಾಲೂಕು ಬೆಳತೂರು ಗ್ರಾಮದ ಮೂರ್ತಿ ಸಾವಿನ  (ಲಾಕಪ್ ಡೆತ್?) ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಎಂಬುವವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ದೂರು ನೀಡಿದ್ದಾರೆ.

ರಾಜ್ಯ ಮಾನವ ಹಕ್ಕುಗಳ ಅಯೋಗ, ಗೃಹ ಸಚಿವ, ರಾಜ್ಯ ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೂ ಪತ್ರ ಬರೆದಿರುವ ಅವರು, ಲಾಕಪ್ ಡೆತ್ ಪ್ರಕರಣವನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ಕಳೆದ ಜು.9ರಂದು ಕಳ್ಳತನ ಆರೋಪದಡಿ ಮೂರ್ತಿಯನ್ನು ವಿಚಾರಣೆಗೆ ಕರೆತಂದು ಪೊಲೀಸರು ತೀವ್ರತರವಾದ ಹಲ್ಲೆ ಮಾಡಿ, ದೈಹಿಕ ಹಿಂಸೆ ನೀಡಿದ ಬಗ್ಗೆ ಸಹ ಆರೋಪಿ ಎನ್ನಲಾದ ಅಂತರಹಳ್ಳಿ ನಾಗರಾಜು ಮಾಧ್ಯಮಗಳಿಗೆ ತಿಳಿಸಿರುವುದನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಬಂಧಿಸಿದ 5 ದಿನಗಳ ನಂತರ ಮೂರ್ತಿ ಮೃತಪಟ್ಟಿದ್ದಾನೆ. ಪೊಲೀಸರ ಹಲ್ಲೆ ಹಾಗೂ ಹೊಟ್ಟೆ ಹಸಿವಿನಿಂದ ಮೃತಪಟ್ಟರಬಹುದಾಗಿದೆ. ಠಾಣೆಯಲ್ಲಿ ಮೃತಪಟ್ಟ ಶವವನ್ನು ಹೊರಗಡೆ ಸಾಗಿಸುವ, ಅನಾಥ ಶವವಾಗಿಸುವ ಹುನ್ನಾರ ಪೊಲೀಸ್ ಅಧಿಕಾರಿಗಳಿಂದ ನಡೆದಿದ್ದು, ಈ ವಿಷಯದಲ್ಲಿ ಎಸ್ಪಿ ಜಿ.ರಾಧಿಕಾ, ಎಎಸ್ಪಿ ಬಿ.ಎಸ್.ಲಾವಣ್ಯ, ಡಿವೈಎಸ್ಪಿ ಗಂಗಾಧರಸ್ವಾಮಿ ಅವರು ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ್ದಾರೆ ಎಂದು ಅವರು ದೂರಿದ್ದಾರೆ.

ಪಶ್ಚಿಮ ಠಾಣೆ ಕಟ್ಟದಲ್ಲೇ ಡಿವೈಎಸ್ಪಿ, ಸಿಪಿಐ ಕಚೇರಿ, ಪಶ್ಚಿಮ ಠಾಣೆಯ ಸಬ್‍ಇನ್ಸ್ ಪೆಕ್ಟರ್ ಕಚೇರಿ, ಕ್ರೈಂ ಸಬ್‍ಇನ್ಸ್ ಪೆಕ್ಟರ್ ಕಚೇರಿಗಳಿದ್ದು, ಸುಮಾರು 80 ಮಂದಿ ಸಿಬ್ಬಂದಿ ಇದ್ದಾರೆ. ಹೀಗಿರುವುದರಿಂದ ಮೂರ್ತಿ ನೇಣು ಹಾಕಿಕೊಳ್ಳಲು ಸಾಧ್ಯವಿಲ್ಲ. ಇದೊಂದು ಲಾಕಪ್ ಡೆತ್ ಪ್ರಕರಣವಾಗಿದೆ ಎಂದು ಅವರು ಆಪಾದಿಸಿದ್ದಾರೆ.

ಮೃತ ಮೂರ್ತಿ ಕುಟುಂಬಕ್ಕೆ ಪೊಲೀಸ್ ಅಧಿಕಾರಿ ಸಿಬ್ಬಂದಿಯೇ 8 ಲಕ್ಷ ರೂ. ಸಂಗ್ರಹಿಸಿ ಪರಿಹಾರ ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಕಾನೂನುಬಾಹಿರ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಶವವನ್ನು ಹೂಳದೆ ಕಾನೂನುಬಾಹಿರವಾಗಿ ಪೊಲೀಸರ ಸಮ್ಮುಖದಲ್ಲೇ ಸುಟ್ಟು ಹಾಕಿದ್ದು ಏಕೆ ಎಂದು ಪ್ರಶ್ನಿಸಿರುವ ಅವರು, ಎಸ್ಪಿ, ಎಎಸ್ಪಿ, ಡಿವೈಎಸ್ಪಿ, ಇತರೆ ಅಧೀನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News