ಮಲೆನಾಡಿನಲ್ಲಿ ಮುಂದುವರೆದ ಮಳೆ: ದಶಕಗಳ ಬಳಿಕ ಭದ್ರಾ ಡ್ಯಾಮ್ ಭರ್ತಿ

Update: 2018-07-24 12:35 GMT

ಚಿಕ್ಕಮಗಳೂರು, ಜು.24: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಂಗಳವಾರ ಮಳೆ ಆರ್ಭಟ ಕಡಿಮೆಯಾಗಿದ್ದು, ಜಿಲ್ಲಾದ್ಯಂತ ಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ಅಜ್ಜಂಪುರದಲ್ಲಿ ಮಳೆ ಗಾಳಿಗೆ ಮೂರು ಮನೆಗಳಿಗೆ ಹಾನಿಯಾಗಿದ್ದು. ಸುಮಾರು 50 ಸಾವಿರ ರೂ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ

ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ ತಾಲೂಕುಗಳಲ್ಲಿ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆತಾದರೂ ನಿರಂತರವಾಗಿ ಸಾಧಾರಣ ಮಳೆಯಾಗುತ್ತಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ನಿರಂತರ ಮಳೆಯಾಗಿದೆ. ಮೂಡಿಗೆರೆ ಭಾಗದಲ್ಲಿ ಮಧ್ಯಾಹ್ನದ ವರೆಗೂ ಕಡಿಮೆ ಪ್ರಮಾಣದಲ್ಲಿದ್ದ ಮಳೆ ಸಂಜೆಯ ನಂತರ ಬಿರುಸುಗೊಂಡಿದೆ ಎಂದು ತಿಳಿದು ಬಂದಿದೆ. ಮೂಡಿಗೆರೆ ಭಾಗದಲ್ಲಿ ಮಳೆಯೊಂದಿಗೆ ಗಾಳಿಯೂ ಬೀಸುತ್ತಿದ್ದು, ಕಾಫಿಗಿಡಗಳಿಗೆ ಹಾನಿಯಾಗುವ ಆತಂಕದಲ್ಲಿ ರೈತರಿದ್ದಾರೆ. 

ಕಡೂರು, ಬೀರೂರು, ತರೀಕೆರೆ ಭಾಗದಲ್ಲಿ ತುಂತುರು ಮಳೆಯಾಗುತ್ತಿದೆ. ತರೀಕೆರೆ ತಾಲೂಕಿನ ಅಜ್ಜಂಪುರದ ಶೇಷಮ್ಮ ಎಂಬವರ ಮನೆಗೆ ಹಾನಿಯಾಗಿದೆ. ಅದೇ ರೀತಿ ಅಜ್ಜಂಪುರ ಹೋಬಳಿಯ ಹೆಬ್ಬೂರು ಗ್ರಾಮದಲ್ಲಿ ಹಾಲಸಿದ್ದು ಎಂಬವರಿಗೆ ಸೇರಿದ ಮನೆಯ ಗೋಡೆ ಕುಸಿದಿದ್ದು, ಅದೇ ಗ್ರಾಮದ ಪರ್ವತಮ್ಮ ಎಂಬವರ ಮನೆಯ ಗೋಡೆ ಕುಸಿದಿದೆ ಎಂದು ತಿಳಿದು ಬಂದಿದೆ.

ಭದ್ರಾ ಡ್ಯಾಂ ಗೇಟ್ ಓಪನ್: 
ಕಳೆದ ಅನೇಕ ದಿನಗಳಿಂದ ಮಲೆನಾಡು ಹಾಗೂ ತರೀಕೆರೆ ಸುತ್ತಮುತ್ತಲ ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಭದ್ರಾನದಿಗೆ ಲಕ್ಕವಳ್ಳಿ ಸಮೀಪ ಮೀಸಲಾಗಿರುವ ಭದ್ರಾಡ್ಯಾಂ ಭರ್ತಿಯಾಗಿದ್ದು, ಮಂಗಳವಾರ ಮಧ್ಯಾಹ್ನ ನಾಲ್ಕು ಗೇಟ್‍ಗಳ ಮೂಲಕ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ಅನೇಕ ವರ್ಷಗಳಿಂದ ಭದ್ರಾ ಡ್ಯಾಂ ಭರ್ತಿಯಾಗಿರಲಿಲ್ಲ. ಈ ಬಾರಿ ಮಲೆನಾಡಿನಲ್ಲಿ ಧಾರಾಕಾರ ಮಳೆಯಾದ ಪರಿಣಾಮ ಭದ್ರಾ ಡ್ಯಾಂ ಭರ್ತಿಯಾಗಿದೆ. ಅಲ್ಲದೇ ಈ ಬಾರಿ ಅತೀ ಶ್ರೀಘ್ರದಲ್ಲಿ ಭದ್ರಾ ಡ್ಯಾಂ ತುಂಬಿದ್ದು, ಮಂಗಳವಾರ ಡ್ಯಾಮ್‍ನ ನಾಲ್ಕು ಗೇಟ್‍ಗಳ ಮೂಲಕ ನೀರನ್ನು ಹೊರಬಿಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News