ಕೊಡಗಿನಲ್ಲಿ ಮತ್ತೆ ಭಾರೀ ಗಾಳಿ ಮಳೆ: ಭಾಗಮಂಡಲ ರಸ್ತೆಗಳು ಜಲಾವೃತ

Update: 2018-07-24 13:31 GMT

ಮಡಿಕೇರಿ, ಜು.24: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲೆ, ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪ್ತಿಸಿದೆ. ಕಳೆದೊಂದು ದಿನದ ಅವಧಿಯಲ್ಲಿನ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲದ ತ್ರಿವೇಣಿ ಸಂಗಮದ ನೀರು ರಸ್ತೆಗಳನ್ನು ಆವರಿಸಿದೆ.

ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ 3 ಇಂಚಿನಷ್ಟು ಮಳೆಯಾಗಿದೆಯಾದರು, ಮಂಗಳವಾರ ಹಗಲಿನಲ್ಲಿ ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿಯ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯಲಾರಂಭಿಸಿದ್ದು, ವಾಹನ ಸಂಚಾರ ಕಡಿತಗೊಳ್ಳುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನ ಮುಂಗಾರಿನ ಅವಧಿಯಲ್ಲಿ ಇಲ್ಲಿಯವರೆಗೆ ನಾಲ್ಕೈದು ಬಾರಿ ಪ್ರವಾಹವೇರ್ಪಟ್ಟು ಭಾಗಮಂಡಲ ಕ್ಷೇತ್ರಕ್ಕೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಕಳೆದ ಪುನರ್ವಸು ಮಳೆಯ ಸಂದರ್ಭ ವಾರಗಟ್ಟಲೆ ಕ್ಷೇತ್ರ ಪ್ರವಾಹದಿಂದ ಆವೃತ್ತವಾಗಿ ಗ್ರಾಮೀಣರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ‘ತ್ರಿವೇಣಿ’ ಸಂಗಮದಲ್ಲಿ ಕಾವೇರಿ ಉಕ್ಕಿ ಹರಿಯಲಾರಂಭಿಸಿದೆ. ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ವಿಭಾಗಗಳಲ್ಲು ಮಂಗಳವಾರ ಉತ್ತಮ ಮಳೆಯಾಗಿದೆ. 

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ 3 ಇಂಚಿಗೂ ಹೆಚ್ಚಿನ ಮಳೆಯಾಗಿದೆ. ಶೀತಗಾಳಿ ಮತ್ತು ದಟ್ಟ ಮಂಜು ನಗರವನ್ನು ಆವರಿಸಿಕೊಂಡಿದ್ದು, ವಾಹನ ಚಾಲಕರು ಹೆಡ್ ಲೈಟ್‍ಗಳನ್ನು ಉರಿಸಿಕೊಂಡು ವಾಹನ ಚಲಾಯಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ. ಸೋಮವಾಪೇಟೆ ತಾಲೂಕಿನ ಪುಷ್ಟಗಿರಿ ತಪ್ಪಲಿನ ಪ್ರದೇಶಗಳಲ್ಲಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.

ದೋಣಿಕಡುವು ಗ್ರಾಮಕ್ಕೆ ದೋಣಿ

ಕೊನೆಗೂ ಬೇಂಗೂರು ಗ್ರಾಮಸ್ಥರು ಪ್ರವಾಹ ಪರಿಸ್ಥಿತಿಯಿಂದ ಹೊರ ಬಂದಿದ್ದಾರೆ. ಗ್ರಾಮಕ್ಕೆ ಜಿಲ್ಲಾಡಳಿತ ಹೊಸ ದೋಣಿ ಖರೀದಿಸಿ ತಂದಿದೆ. ಮಂಗಳೂರಿನ ನೇತ್ರಾವತಿ ಬೋಟ್ ನಿರ್ಮಾಣ ಸಂಸ್ಥೆಯಿಂದ 90 ಸಾವಿರ ರೂ. ವೆಚ್ಚದಲ್ಲಿ ಈ ಬೋಟ್ ಖರೀದಿಸಿ ತರಲಾಗಿದೆ. ದೋಣಿ ಸಾಗಾಟಕ್ಕೆ ಸುಮಾರು 30 ಸಾವಿರ ರೂ. ವೆಚ್ಚವಾಗಿದೆ.

ಅತಿವೃಷ್ಟಿಯಿಂದಾಗಿ ಚೇರಂಬಾಣೆ ಸಮೀಪದ ಬೇಂಗೂರು ಗ್ರಾಮ ಜಲಾವೃತವಾಗಿತ್ತು. ಸುಮಾರು 15 ದಿನಗಳ ಕಾಲ ಹೊರ ಜಗತ್ತಿನ ಸಂಪರ್ಕ ಕಡಿದುಕೊಂಡಿತ್ತು. ತಕ್ಷಣ ಸ್ಪಂದಿಸಿದ ಜಿಲ್ಲಾಡಳಿತ ಬೇಂಗೂರು ಗ್ರಾಮಕ್ಕೆ ಹೊಸ ನಾಡ ದೋಣಿಯನ್ನು ಕೊಡುಗೆಯಾಗಿ ನೀಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. 

ಮಕ್ಕಂದೂರಿನಲ್ಲಿ ಮುಂದುವರೆದ ಆತಂಕ
ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿ ಬಾಯಿ ಬಿಟ್ಟು ಆತಂಕ ಮೂಡಿಸಿದ್ದ ಮಕ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ಆತಂಕ ಮುಂದುವರೆದಿದೆ. ಮನೆ ಬಿರುಕು ಬಿಟ್ಟು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುವ ಮಂಜುನಾಥ್ ಅವರ ಮನೆ ಸದಸ್ಯರಿಗೆ ಭೂಮಿಯೊಳಗೆ ಜಲಸಂಚಾರವಾಗುತ್ತಿರುವ ಶಬ್ಧ ಕೇಳಿಸತೊಡಗಿದೆ. ಮಂಜುನಾಥ್ ಅವರ ಪ್ರಕಾರ ಕಳೆದ 24 ಗಂಟೆಗಳಿಂದ ಮಕ್ಕಂದೂರಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಭೂಮಿ ಬಿರುಕು ಬಿಟ್ಟ ಪ್ರದೇಶದಲ್ಲಿ ಜಲಸಂಚಾರದ ಶಬ್ಧ ಹೆಚ್ಚಾಗಿದೆ. ತಮ್ಮ ಮನೆಯ ಮೇಲ್ಭಾಗದಲ್ಲಿರುವ ನೆರೆಯ ಮನೆಯೊಂದು ಬಿರುಕು ಬಿಡಲು ಆರಂಭವಾಗಿದೆ ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News