ಕೋಮುವಾದಿಗಳನ್ನು ದೂರ ಇಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ರಚನೆ: ಸಚಿವ ಕೆ.ಜೆ.ಜಾರ್ಜ್
ಮೈಸೂರು,ಜು.24: ಕೋಮುವಾದಿಗಳನ್ನು ದೂರ ಇಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ರಚನೆಯಾಗಿದೆ. ಕೋಮುವಾದಿಗಳನ್ನು ನಾಶ ಮಾಡುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಸ್ಮರಣಾರ್ಥವಾಗಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಸೇವೆ ಅಪಾರ. ಅವರನ್ನು ನಾವೆಲ್ಲರೂ ನೆನೆಯಲೇ ಬೇಕು. ಕೋಮುವಾದಿಗಳನ್ನು ನಾಶ ಮಾಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ನೋಡಿದ ಮಟ್ಟಿಗೆ ಮೈಸೂರು ಬಹಳಷ್ಟು ಅಭಿವೃದ್ಧಿ ಹೊಂದಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಬರೀ ಪೊಳ್ಳು ಭರವಸೆ ಮಾತ್ರ ನೀಡುತ್ತಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಸಂವಿಧಾನ ರಚಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಅವರ ಕೊಡುಗೆ ಅಪಾರ. ಸಾಮಾಜಿಕ,ನ್ಯಾಯ, ಅಭಿವೃದ್ಧಿಗೆ ಶ್ರಮಿಸಿದವರು ಅಂಬೇಡ್ಕರ್. ಕಾನೂನುಗಳ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಬರೆದಿದ್ದಾರೆ. ಸರ್ವಧರ್ಮಗಳನ್ನು ಸಮಾನವಾಗಿ ಗೌರವಿಸಬೇಕು ಎಂಬ ಸಂದೇಶ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಇರಲಿ ಇಲ್ಲದೇ ಇರಲಿ ರಾಷ್ಟ್ರದಲ್ಲಿ ಒಂದು ದೊಡ್ಡ ಜವಾಬ್ದಾರಿ ಇದೆ. 2013 ,2018 ರಲ್ಲಿ ಬಹುತೇಕ ಕಾಂಗ್ರೆಸ್ ನಾಯಕರು ಗೆಲುವನ್ನು ಸಾಧಿಸಿದರು. ಚುನಾವಣೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ರಾಜಕಾರಣ ನಿಂತ ನೀರಲ್ಲ. ಅದು ಹರಿಯುವ ನೀರು. ನಾವು ಮೈತ್ರಿ ಸರ್ಕಾರ ಮಾಡಿಕೊಂಡಿದ್ದು ಅಧಿಕಾರದ ಆಸೆಗಲ್ಲ. ಕಾಂಗ್ರೆಸ್ ನಲ್ಲಿ ಹಿರಿಯ ನಾಯಕರು ಇರೋದರಿಂದ ಮೈತ್ರಿ ಸರ್ಕಾರ ಹೇಗೆ ನಡೆಸಬೇಕು ಅಂತ ಗೊತ್ತಿದೆ. ಆದ್ದರಿಂದ ಮೈತ್ರಿ ಮಾಡಿಕೊಂಡಿದ್ದೇವೆ. 2019 ಕ್ಕೆ ಜನ ಬದಲಾವಣೆ ಬಯಸುತ್ತಿದ್ದಾರೆ. ಮತ್ತೆ ಜನರು ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಪುರಭವನದ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೈಸೂರಿನ ರೈಲ್ವೇ ನಿಲ್ದಾಣದಲ್ಲಿರುವ ಡಾ.ಬಾಬು ಜಗಜೀವನ್ ರಾಮ್ ಪುತ್ಥಳಿಗೆ ಮಾಲಾರ್ಪಣೆಗೈದು ಗೌರವ ಅರ್ಪಿಸಿದರು.
ಇದೇ ವೇಳೆ ಮೈಸೂರು ಜಿಲ್ಲೆಯ ನೂತನ ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಹಾಗೂ ಸಚಿವ ಕೆ.ಜೆ.ಜಾರ್ಜ್ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಮುಖಂಡೆ ಮಂಜುಳಾ ಮಾನಸ, ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಗ್ರಾಮಾಂತರ ಮಹಿಳಾ ಅಧ್ಯಕ್ಷೆ ನಂದಿನಿ ಚಂದ್ರಶೇಖರ್, ಡಾ. ಪುಷ್ಪ ಅಮರ್ ನಾಥ್, ಪ್ರಕಾಶ್ ಕುಮಾರ್, ಮಹೇಶ್. ಕೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.