ದಾವಣಗೆರೆ: ದಲಿತ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರಿಂದ ವಿರೋಧ
ದಾವಣಗೆರೆ,ಜು.24: ದಲಿತ ಮಹಿಳೆಯ ಶವದ ಅಂತ್ಯಸಂಸ್ಕಾರಕ್ಕೆ ಗೋಮಾಳ ಜಮೀನಿನಲ್ಲಿ ಕೆಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ಶವಸಂಸ್ಕಾರ ನಡೆಸಿದ ಘಟನೆ ನಡೆಯಿತು.
ತಾಲೂಕಿನ ಕುಕ್ಕುವಾಡ ಗ್ರಾಮದ ದಲಿತ ಮಹಿಳೆ ಗೌರಮ್ಮ ಎನ್ನುವವರು ಸೋಮವಾರ ಮೃತಪಟ್ಟಿದ್ದರು. ಮಂಗಳವಾರ ಶವಸಂಸ್ಕಾರಕ್ಕೆ ದಲಿತ ಕುಟುಂಬಗಳು ಗೋಮಾಳಕ್ಕೆ ತೆರಳಿದಾಗ ಅಂತ್ಯಸಂಸ್ಕಾರ ಮಾಡದಂತೆ ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಸ್ಥಳಕ್ಕೆ ಹದಡಿ ಪೊಲೀಸರು ಆಗಮಿಸಿದ್ದು, ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ನಮಗೆ ತಹಸೀಲ್ದಾರ್ ಅವರು ಶವಸಂಸ್ಕಾರಕ್ಕೆ ಅನುಮತಿ ನೀಡಿದ್ದಾರೆ ಎಂದು ದಲಿತ ಕುಟುಂಬದವರು ವಾದ ನಡೆಸಿದ್ದಲ್ಲದೇ, ಶವ ಇಟ್ಟುಕೊಂಡು ಹೋರಾಟಕ್ಕೆ ಮುಂದಾದರು.
ಅಂತ್ಯಕ್ರಿಯೆ ಬೆಳಗ್ಗೆ 11 ಗಂಟೆಗೆ ಆರಂಭವಾಯಿತಾದರೂ ಗೋಮಾಳ ಜಾಗದ ರೈತರು ಕ್ರಿಯೆ ನೆರವೇರಿಸಲು ವಿರೋಧವೊಡ್ಡಿದರು. ಸ್ಥಳದಲ್ಲಿ ಹದಡಿ ಪೊಲೀಸ್ ಸಬ್‍ಇನ್ಸ್ ಪೆಕ್ಟರ್ ರಾಜೇಂದ್ರನಾಯ್ಕ್, ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು, ದಸಂಸ ಜಿಲ್ಲಾ ಹಾಗೂ ತಾಲೂಕು ಮುಖಂಡರೊಂದಿಗೆ ರೈತರು ವಾಗ್ವಾದಕ್ಕಿಳಿದರು. ಗ್ರಾಮದ ಪ್ರವೇಶವಾದ್ದರಿಂದ ಊರೊಳಗೆ ವಾಸನೆ ಬರುತ್ತದೆ, ಇಲ್ಲಿ ಅಂತ್ಯಕ್ರಿಯೆ ಮಾಡಬಾರದು ಎಂದು ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ, ಮಲ್ಲಿಕಾರ್ಜುನ್ ಮತ್ತಿತರರು ಪಟ್ಟುಹಿಡಿದರು. ಕೊನೆಗೆ ಪೊಲೀಸರು ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗವಾದ್ದರಿಂದ ಇಲ್ಲಿ ಸಂಸ್ಕಾರಕ್ಕೆ ಅಡ್ಡಿ ಉಂಟುಮಾಡುವಂತಿಲ್ಲ ಎಂದು, ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಟ್ಟರು.
ಪ್ರಸ್ತುತ ಇರುವ ಗೋಮಾಳದಲ್ಲಿ ಅಕ್ಕಪಕ್ಕದ ಜಮೀನುದಾರರು ಶವ ಹೂಳಲು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿ ಇದುವರೆಗೂ ಭೂರಹಿತರಾರೂ ಶವಸಂಸ್ಕಾರ ಮಾಡುತ್ತಿರಲಿಲ್ಲ. ಆದರೆ, ಮಂಗಳವಾರ ಮರಣ ಹೊಂದಿದ್ದ ಕುಕ್ಕುವಾಡ ಗ್ರಾಪಂ ಉಪಾಧ್ಯಕ್ಷೆ ಪ್ರತಿಮಾ ಸುರೇಶ್ ಅವರ ಅತ್ತೆ ಗೌರಮ್ಮನವರ ಶವಸಂಸ್ಕಾರ ಗ್ರಾಮದ ಕಾಯ್ದಿರಿಸಿದ ಜಾಗದಲ್ಲಿಯೇ ಮಾಡಬೇಕೆಂದು ಮೃತರ ಸಂಬಂಧಿಕರು ನಿರ್ಧರಿಸಿದ್ದು, ಅದರಂತೆ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಶವಸಂಸ್ಕಾರ ನೆರವೇರಿಸಿದರು.