×
Ad

ಶಿವಮೊಗ್ಗ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ: ಭಾರೀ ಚರ್ಚೆಗೆ ಗ್ರಾಸವಾದ 'ಕೋರಂ'

Update: 2018-07-24 23:09 IST

ಶಿವಮೊಗ್ಗ, ಜು. 24: ಶಿವಮೊಗ್ಗ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತರೂಢ ಜೆಡಿಎಸ್-ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಏರ್ಪಟ್ಟಿರುವ ಬಿಕ್ಕಟ್ಟು, ಅಕ್ಷರಶಃ ಕಗ್ಗಂಟಾಗಿ ಮಾರ್ಪಟ್ಟಿದೆ. ಕಾನೂನು ಸಮರಕ್ಕೂ ನಾಂದಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮುಂದುವರಿದ ಸಾಮಾನ್ಯ ಸಭೆಯು ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿರುವ ಬಿಜೆಪಿ ಸದಸ್ಯರು, ಸಭೆಗೆ ಗೈರು ಹಾಜರಾದರು. ಇದರಿಂದ ಕೋರಂ ಕೊರತೆ ಉಂಟಾಯಿತು.  

ಈ ನಡುವೆ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡಲಾಗಿದೆ ಎಂಬ ನಿರ್ಣಯ ಅಂಗೀಕರಿಸಿದರು. ಮತ್ತೊಂದೆಡೆ ಸಿಇಓರವರು ಸರ್ಕಾರದ ನಿರ್ದೇಶನ ಪಡೆಯಲಾಗುವುದು ಎಂದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾತಿನ ಚಕಮಕಿ ನಡೆಸಿದರು. ಮುಂದುವರೆದ ಸಭೆಗೆ ಪಂಚಾಯತ್ ರಾಜ್ ನಿಯಮದ ಅನುಸಾರ ಕೋರಂ ಅಗತ್ಯವಿಲ್ಲ ಎಂದು ಹೇಳಿದರು. ಅಧ್ಯಕ್ಷರಿಗೆ ಆಯ್ಕೆ ಅಧಿಕಾರ ನೀಡುವ ನಿರ್ಣಯ ಅಂಗೀಕರಿಸಲಾಗಿದೆ ಎಂದರು. ನಿರ್ಣಯ ಅಂಗೀಕರಿಸಲಾಗಿದೆ ಎಂದು ಹೇಳಿದ ಅಧ್ಯಕ್ಷರು ಸಭೆಯನ್ನು ಮುಂದೂಡಲಾಗಿದೆ ಎಂದರು.

ಮುಂದುವರಿದ ಗೊಂದಲ: ಕಳೆದ ಜು. 17 ರಂದು ಜಿ.ಪಂ. ಸಾಮಾನ್ಯ ಸಭೆ ನಡೆದಿತ್ತು. ಈ ವೇಳೆ ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂದು ಪಟ್ಟು ಹಿಡಿದಿದ್ದರು. ಇದು ಆಡಳಿತ - ಪ್ರತಿಪಕ್ಷದ ನಡುವೆ ಗದ್ದಲ ಉಂಟಾಗಿತ್ತು. ಅಂತಿಮವಾಗಿ ಅಧ್ಯಕ್ಷರು ಸಭೆ ಮುಂದೂಡಿದ್ದರು. 

ಮಂಗಳವಾರ ಮುಂದುವರಿದ ಸಭೆ ಆಯೋಜಿಸಲಾಗಿತ್ತು. ಆಡಳಿತ ಪಕ್ಷದ ಸದಸ್ಯರು ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಧಾರ ಮಾಡಿದ್ದರು. ಮತ್ತೊಂದೆಡೆ ಚುನಾವಣೆ ಪಟ್ಟಿನಿಂದ ಹಿಂದೆ ಸರಿಯದ ಬಿಜೆಪಿಯು, ಕೋರಂ ಕೊರತೆ ಉಂಟು ಮಾಡಿ ಸಭೆ ನಡೆಯದಂತೆ ಮಾಡುವ ತಂತ್ರಗಾರಿಕೆ ನಡೆಸಿತ್ತು. ಅದರಂತೆ ಮುಂದುವರಿದ ಸಭೆಗೆ ಬಿಜೆಪಿ ಸದಸ್ಯ ವೀರಭದ್ರಪ್ಪ ಪೂಜಾರ್ ಹೊರತುಪಡಿಸಿ, ಉಳಿದಂತೆ ಆ ಪಕ್ಷದ ಯಾವೊಬ್ಬ ಸದಸ್ಯರು ಹಾಜರಾಗಿರಲಿಲ್ಲ. ಸಭೆ ನಡೆಸಬೇಕಾದರೆ 26 ಸದಸ್ಯರು ಸಭೆಯಲ್ಲಿ ಹಾಜರಿರಬೇಕಾಗಿತ್ತು. ಆದರೆ 20 ಸದಸ್ಯರು ಮಾತ್ರ ಸಭೆಯಲ್ಲಿದ್ದುದು ಕಂಡುಬಂದಿತು. 

ಈ ಕಾರಣದಿಂದ 11 ಗಂಟೆಗೆ ಆರಂಭವಾಗಬೇಕಾದ ಸಭೆ 11.45 ಸಮಯ ಮೀರಿದರೂ ಆರಂಭವಾಗಲಿಲ್ಲ. ಈ ವೇಳೆ ಆಡಳಿತ ಪಕ್ಷದ ಸದಸ್ಯರಾದ ಜೆ.ಪಿ.ಯೋಗೀಶ್, ಕಲಗೋಡು ರತ್ನಾಕರ್, ನರಸಿಂಗನಾಯ್ಕ್, ವೀರೇಶ್ ಕೊಟಗಿ, ತಾ.ಪಂ. ಅಧ್ಯಕ್ಷ ಮಲ್ಲಿಕಾರ್ಜು ಹಕ್ರೆ ಮೊದಲಾದವರು ಮಾತನಾಡಿದರು. 'ಪಂಚಾಯತ್ ರಾಜ್ ನಿಯಮದ ಅನುಸಾರ, ಮುಂದುವರಿದ ಸಾಮಾನ್ಯ ಸಭೆಗೆ ಕೋರಂನ ಅಗತ್ಯವಿಲ್ಲ. ಜು. 17 ರಂದು ನಡೆದ ಸಭೆಯಲ್ಲಿ ಕೋರಂ ಇದೆ. ಈ ಕಾರಣದಿಂದ ಅಧ್ಯಕ್ಷರ ಅಧಿಕಾರದಿಂದ ಸಭೆ ನಡೆಸಬಹುದಾಗಿದೆ. ನಿಯಮಾನುಸಾರ ಸಭೆ ನಡೆಸಲು ಅವಕಾಶ ನೀಡುವಂತೆ' ಸಿಇಓಗೆ ಆಗ್ರಹಿಸಿದರು. 'ಇಲ್ಲವಾದರೆ ನಾವುಗಳೇ ಸಭೆಯಿಂದ ಹೊರ ನಡೆಯಬೇಕಾಗುತ್ತದೆ' ಎಂದರು. 

ಈ ವೇಳೆ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್‍ರವರು ಸಭೆ ನಡೆಸುವಂತೆ ಅನುಮತಿ ನೀಡಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ಸ್ಥಾಯಿ ಸಮಿತಿಗಳ ರಚನೆಯ ಸಂಪೂರ್ಣ ಅಧಿಕಾರವನ್ನು ಅಧ್ಯಕ್ಷರಿಗಿದೆ, ಈ ಕುರಿತು ನಿರ್ಣಯ ಕೈಗೊಳ್ಳಬೇಕು' ಎಂದು ಅಧ್ಯಕ್ಷರಿಗೆ ಆಗ್ರಹಿಸಿದರು. ಇದಾದ ಬಳಿಕ ಅಧ್ಯಕ್ಷರು ಸಭೆಯನ್ನು ಮುಂದೂಡಿರುವುದಾಗಿ ತಿಳಿಸಿದರು. 

ಕಾನೂನಿನಲ್ಲಿ ಅವಕಾಶವಿದೆ : ಸದಸ್ಯ ಯೋಗೇಶ್‍ಗೌಡ 

'ಜಿ.ಪಂ.ನ ಮುಂದುವರಿದ ಸಾಮಾನ್ಯ ಸಭೆಗೆ ಕೋರಂ ಗಣನೆಗೆ ಬರುವುದಿಲ್ಲ. ಕರ್ನಾಟಕ ಪಂಚಾಯತ್ ರಾಜ್ಯ ಕಾಯ್ದೆ 1993 ರ ಸಾಮಾನ್ಯ ಸಭೆ ನಡೆಸುವ ವಿಷಯಕ್ಕೆ ಸಂಬಂಧಿಸಿದಂತಿರುವ ವಿಧಿ-ನಿಯಮದಲ್ಲಿ ಮುಂದೂಡಿದ ಸಾಮಾನ್ಯ ಸಭೆಗೆ ಕೋರಂ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೇ ವಿಷಯವನ್ನು ಸಿಇಓರವರ ಗಮನಕ್ಕೂ ತಂದಿದ್ದೆವೆ. ನಿಯಮಾನುಸಾರ ಅಧ್ಯಕ್ಷರು ಸಭೆ ನಡೆಸಿದ್ದಾರೆ. ಇದು ಕಾನೂನು ಸಮ್ಮತವಾಗಿದೆ' ಎಂದು ಆಡಳಿತ ಜೆ.ಪಿ.ಯೋಗೀಶ್‍ರವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ನಿರ್ಣಯ ಕೈಗೊಳ್ಳಲಾಗಿದೆ : ಸದಸ್ಯ ವೀರೇಶ್ ಕೊಟಗಿ
'ಮುಂದುವರಿದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಅಧ್ಯಕ್ಷರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ. ನಿಯಮಾನುಸಾರವೇ ಮುಂದುವರಿದ ಸಭೆ ನಡೆದಿದೆ. ಇದಕ್ಕೆ ಕಾನೂನಿನ ಮಾನ್ಯತೆಯಿದೆ' ಎಂದು ಸದಸ್ಯ ವೀರೇಶ್ ಕೊಟಗಿಯವರು ತಿಳಿಸಿದ್ದಾರೆ. 

ಕೋರಂ ಇಲ್ಲದೆ ಸಭೆ ನಡೆಸಲು ಅವಕಾಶವಿಲ್ಲ : ಶಾಸಕ ಕೆ.ಬಿ.ಅಶೋಕ್‍ನಾಯ್ಕ್
'ಪಂಚಾಯತ್ ರಾಜ್ ಕಾಯ್ದೆ ಕಲಂ 180 ಸಿ ಅನುಸಾರ ಕೋರಂ ಇಲ್ಲದ ಹೊರತಾಗಿ ಜಿ.ಪಂ. ಸಾಮಾನ್ಯ ಸಭೆ ನಡೆಸಲು ಸಾಧ್ಯವಿಲ್ಲ. ಹಾಗೆಯೇ ಮುಂದುವರಿದ ಸಾಮಾನ್ಯ ಸಭೆಗೂ ಕೋರಂ ಅಗತ್ಯವಾಗಿದೆ. ಮಂಗಳವಾರ ಕೋರಂ ಕೊರತೆ ಕಾರಣದಿಂದ ಜಿ.ಪಂ. ಮುಂದುವರಿದ ಸಭೆ ನಡೆದಿಲ್ಲ. ಈ ಸಭೆಯಲ್ಲಿ ಯಾವುದೇ ನಿರ್ಣಯ ಅಂಗೀಕರಿಸಿದ್ದರೂ ಅದಕ್ಕೆ ಕಾನೂನಿನ ಮಾನ್ಯತೆಯಿಲ್ಲ' ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಹಾಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ.ಅಶೋಕ್‍ನಾಯ್ಕ್ ರವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News