ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಸಿದ್ದತೆ: ಸಚಿವ ಡಿ.ಕೆ.ಶಿವಕುಮಾರ್

Update: 2018-07-24 18:01 GMT

ಮಂಡ್ಯ, ಜು.24: ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು, ನಿರ್ಮಾಣದಿಂದ ನೀರಿನ ಅಭಾವದ ಸಂದರ್ಭದಲ್ಲಿ ಅನುಕೂಲವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ತಾಲೂಕಿನ ಸಿದ್ದಯ್ಯನಕೊಪ್ಪಲು ಗ್ರಾಮದಲ್ಲಿ ಮಂಗಳವಾರ ನಡೆದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎನ್.ನಾಗರಾಜು ಶ್ರಾದ್ಧಾ ಕಾರ್ಯಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಣೆಕಟ್ಟು ನಿರ್ಮಾಣದಿಂದ ಕುಡಿಯುವ ನೀರು ಪಡೆದು ಉಳಿದ ನೀರನ್ನು ತಮಿಳುನಾಡಿಗೆ ಹರಿಸಬಹುದು ಎಂದರು.

ಲೋಕಸಭಾ ಚುನಾವಣೆವರೆಗೂ ಸಮ್ಮಿಶ್ರ ಸರಕಾರ ಇರುತ್ತೆ. ಅನಂತರ ಪತನವಾಗುತ್ತೆ ಎಂಬ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಉಸ್ತುವಾರಿ ವೇಣುಗೋಪಾಲ್ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದರು.

ಲೋಕೋಪಯೋಗಿ ಇಲಾಖೆಯ ಅಕ್ರಮ ವರ್ಗಾವಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಬೇರೆ ಇಲಾಖೆಗಳ ಬಗ್ಗೆ ನಾನು ಮಾತನಾಡಲ್ಲ. ನಾನು ಸ್ಪೋಕ್ಸ್ ಮನ್ ಅಲ್ಲ. ನನ್ನ ಇಲಾಖೆ ಬಗ್ಗೆ ಅಷ್ಟೇ ನಾನು ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಮಂಡ್ಯ ಜನರು ಮುಂದೆ ಬೇಸಾಯ ಪದ್ಧತಿ ಬದಲಾವಣೆ ಮಾಡಿದರೆ ಒಳಿತು. ರಾಯಚೂರು ಕಡೆ ಕಡಿಮೆ ನೀರು ಬಳಸಿ ಹೊಸ ತಳಿಯ ಭತ್ತ ಬೆಳೆಯಲಾಗುತ್ತಿದೆ. ಆ ಭತ್ತದ ತಳಿಯನ್ನು ಮಂಡ್ಯದಲ್ಲಿಯೂ ಬೆಳೆದರೆ ನೀರಿನ ಸಮಸ್ಯೆ ತಪ್ಪುತ್ತದೆ ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News