ಚಿಕ್ಕಮಗಳೂರು: ಮೂಲಸೌಕರ್ಯಕ್ಕಾಗಿ ಕಲ್ಲೊಡ್ಡಿ ನಿವಾಸಿಗಳಿಂದ ಧರಣಿ
ಚಿಕ್ಕಮಗಳೂರು, ಜು.24: ನಗರದ ಹೊರವಲಯದಲ್ಲಿರುವ ಕಲ್ಲೊಡ್ಡಿ, ಇಂದಿರಾಗಾಂಧಿ ಬಡಾವಣೆಗಳಿಗೆ ಸುಸಜ್ಜಿತ ರಸ್ತೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ. ಕೂಡಲೇ ಜಿಲ್ಲಾಡಳಿತ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಿವಾಸಿಗಳು ನಗರಸಭೆ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಡಾವಣೆಯಲ್ಲಿರುವ ರಸ್ತೆಗಳು ಮಳೆಗಾಲವಾದರಿಂದ ಕೆಸರಿನಿಂದ ಕೂಡಿದ್ದು, ಸಂಚರಿಸಲು ತೊಂದರೆಯಾಗಿದೆ. ರಸ್ತೆಯನ್ನು ಸರಿಪಡಿಸುವಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ ಎಂದು ಕಿಡಿಕಾರಿದರು.
ನೂತನವಾಗಿ ನಿರ್ಮಾಣವಾಗುತ್ತಿರುವ ವಾಜಪೇಯಿ ವಸತಿ ಬಡಾವಣೆಯಿಂದ ನೀರು ಗ್ರಾಮಕ್ಕೂ ನುಗ್ಗುತ್ತಿದ್ದು, ನೀರು ಸಮರ್ಪಕವಾಗಿ ಹರಿಯಲು ಚರಂಡಿಗಳಿಲ್ಲದೇ ಓಡಾಡುವ ರಸ್ತೆಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ. ಕುಡಿಯುವ ನೀರು ಸಹ ಇಲ್ಲದೇ ಜೀವನ ನರಕಸದೃಶವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಸ್ಥಳಕ್ಕೆ ಬಂದ ನಗರಸಭಾ ಸದಸ್ಯ ಟಿ.ರಾಜಶೇಖರ್ ಸೇರಿದಂತೆ ಹಲವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರೂ ಸಹ ತಮ್ಮ ಆಕ್ರೋಶ ಮುಂದುವರಿಸಿದರು.
ಧರಣಿ ನೇತೃತ್ವ ವಹಿಸಿದ್ದ ಸ್ಥಳೀಯ ನಗರಸಭಾ ಸದಸ್ಯೆ ಸುರೇಖಾ ಸಂಪತ್‌ರಾಜ್ ಮಾತನಾಡಿ, ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ನಗರಸಭೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ವಿರೋಧ ಪಕ್ಷದ ಸದಸ್ಯರು ಎಂಬ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸದಸ್ಯ ಟಿ. ರಾಜಶೇಖರ್ ಮತ್ತು ಸುರೇಖಾ ಸಂಪತ್‌ರಾಜ್ ಮತ್ತು ಗ್ರಾಮಸ್ಥರ ವಾಗ್ವಾದ ನಡೆಯಿತು. ನಂತರ ಧರಣಿ ನಿರತರು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಂದರ್ಭ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಗಳು, ನಗರಸಭೆ ಸಲ್ಲಿಸಿರುವ 4 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳಿಗೆ ಜೆಲ್ಲಿ ಬಿಚಾವಣೆ ಯೋಜನೆ ಅವೈಜ್ಞಾನಿಕವೂ ಹಾಗೂ ತಾತ್ಕಾಲಿಕವೂ ಆಗಿದೆ. ತಾತ್ಕಾಲಿಕವಾಗಿ ಜೆಲ್ಲಿ ಬಿಚಾವಣೆ ಮಾಡುವ ಬದಲು ನಗರದಲ್ಲಿ ಜರೂರಾಗಿ ಆಗಬೇಕಿರುವ ರಸ್ತೆಗಳನ್ನು ಟಾರ್ ಅಥವಾ ಕಾಂಕ್ರೀಟ್ ರಸ್ತೆಗಳನ್ನು ಶಾಶ್ವತವಾಗಿ ನಿರ್ಮಿಸಿ ಎಂದು ಹೇಳಿದ್ದೇನೆ. ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಜಿಲ್ಲಾಡಳಿತದ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ಸ್ಥಳದಲ್ಲಿಯೇ ಇದ್ದ ನಗರಸಭಾ ಸದಸ್ಯರಿಗೆ ಟಾಂಗ್ ನೀಡಿದರು.
ಮಳೆ ಮುಗಿಯುವರೆಗೂ ತಾತ್ಕಾಲಿಕವಾಗಿ ರಸ್ತೆಯಲ್ಲಿರುವ ಕೆಸರನ್ನು ತೆರವುಗೊಳಿಸಿ ನಡೆದಾಡಲು ಅವಕಾಶಮಾಡಿ ಕೊಡಿ. ಮಳೆ ಬಿಡುವು ನೀಡಿದ ನಂತರ ರಸ್ತೆ ನಿರ್ಮಾಣದ ಕಾಮಗಾರಿ ಕೈಗೊಳ್ಳಿ ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಇದೇ ವೇಳೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಭರವಸೆ ಮೇರೆಗೆ ಧರಣಿ ನಿರತರು ಧರಣಿ ಹಿಂಪಡೆದರು.
ಧರಣಿಯಲ್ಲಿ ಬಡಾವಣೆ ನಿವಾಸಿಗಳಾದ ಸಿರಾಜ್, ದೀಪಕ್, ರೂಕ್ಸಾನ ಸೇರಿದಂತೆ ನೂರಾರು ನಿವಾಸಿಗಳು ಭಾಗವಹಿಸಿದ್ದರು.
ಸುಮಾರು 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಗರದ ವಿವಿಧ ವಾರ್ಡ್‌ಗಳ ರಸ್ತೆಗಳಿಗೆ ಕಲ್ಲು ಬಿಚಾವಣೆ ಮಾಡಲು ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳು ತಿರಸ್ಕರಿಸಿದ್ದಾರೆ.
-ಟಿ.ರಾಜಶೇಖರ್, ನಗರಸಭೆ ಸದಸ್ಯ
ನಗರಸಭೆ ಸಲ್ಲಿಸಿರುವ 4 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಸ್ತೆಗಳಿಗೆ ಜೆಲ್ಲಿ ಬಿಚಾವಣೆ ಯೋಜನೆ ಅವೈಜ್ಞಾನಿಕವೂ ಹಾಗೂ ತಾತ್ಕಾಲಿಕವೂ ಆಗಿದೆ. ತಾತ್ಕಾಲಿಕವಾಗಿ ಜೆಲ್ಲಿ ಬಿಚಾವಣೆ ಮಾಡುವ ಬದಲು ನಗರದಲ್ಲಿ ಜರೂರಾಗಿ ಆಗಬೇಕಿರುವ ರಸ್ತೆಗಳನ್ನು ಟಾರ್ ಅಥವಾ ಕಾಂಕ್ರಿಟ್ ರಸ್ತೆಗಳನ್ನು ಶಾಶ್ವತವಾಗಿ ನಿರ್ಮಿಸಲು ಹೇಳಿದ್ದೇನೆ.
-ಶ್ರೀರಂಗಯ್ಯ, ಜಿಲ್ಲಾಧಿಕಾರಿ