ತಾಲೂಕಿನಲ್ಲಿ ಸರಕಾರಿ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ: ಶಾಸಕ ಕುಮಾರ ಬಂಗಾರಪ್ಪ
ಸೊರಬ, ಜು.24: ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ತಾಲೂಕು ಸಮಸ್ಯೆಯಿಂದ ಬಳಲುತ್ತಿದೆ. ಸಾಕಷ್ಟು ಅನುದಾನಗಳು ಹರಿದು ಬರುತ್ತಿದ್ದರೂ ಮಂಜೂರಾತಿ ಮಾಡಿಸಿಕೊಂಡು ಬರದೆ ಇರುವುದರಿಂದ ತಾಲೂಕು ಹಿಂದುಳಿಯುವಂತಾಗಿದೆ. ಮುಂದಿನ ದಿನಗಳಲ್ಲಿ ಸರಕಾರದ ಗಮನ ಸೆಳೆದು ಹೆಚ್ಚುವರಿ ಅನುದಾನ ತಂದು ತಾಲೂಕನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಕುಮಾರ ಬಂಗಾರಪ್ಪ ತಿಳಿಸಿದ್ದಾರೆ.
ಸೋಮವಾರ ತಾಲೂಕಿನ ಆನವಟ್ಟಿಯ ಸರಕಾರಿ ಬಾಲಿಕಾ ಪ್ರೌಢಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಅಭಿವೃದ್ಧಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಅಭಿವೃದ್ಧಿ ಪರಿಶೀಲನಾ ಸಭೆಗಳು ಕೇವಲ ತಾಲೂಕು ಕೇಂದ್ರಗಳಲ್ಲಿ ನಡೆಯದೆ ಹೋಬಳಿ ಮಟ್ಟದಲ್ಲೂ ವಿಸ್ತರಿಸಿ ಸಭೆ ನಡೆಸಿದಾಗ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಸೌಲಭ್ಯಗಳು ದೊರೆಯಲು ಸಹಾಯಕವಾಗುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಸೌಲಭ್ಯ ನೀಡಬೇಕಾದುದು ಜನಪ್ರತಿನಿಧಿಗಳ ಕರ್ತವ್ಯ. ಆನವಟ್ಟಿ ಶೀಘ್ರವೇ ಪಪಂ ವ್ಯಾಪ್ತಿಗೆ ಸೇರಲಿದ್ದು ಸೊರಬ ಪಟ್ಟಣ ಕೂಡ ಪುರಸಭಾ ಮಟ್ಟಕ್ಕೆ ಮೇಲ್ದರ್ಜೆಗೇರಲಿದೆ ಎಂದು ಹೇಳಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು, ಇಂಡಿ ಹಳ್ಳಿ ಗ್ರಾಮದ ಸರಕಾರಿ ಹಾಸ್ಟೆಲ್ ಕನಿಷ್ಠ ಸೌಲಭ್ಯದಿಂದ ವಂಚಿತವಾಗಿದೆ. ಮಳೆಗಾಲದಲ್ಲೂ ಹಾಸ್ಟೆಲ್‌ನಲ್ಲಿ ಮಕ್ಕಳು ಮಲಗಲು ಮಂಚವಿಲ್ಲದೆ ತೇವಗೊಂಡಿರುವ ನೆಲದ ಮೇಲೆ ಮಲಗುವಂತಾಗಿದೆ. ಮಕ್ಕಳ ಸ್ನಾನಕ್ಕಾಗಿ ಬಿಸಿ ನೀರು ನೀಡಲು ಸೋಲಾರ್ ಉಪಕರಣಗಳು ಸಮರ್ಪಕವಾಗಿಲ್ಲ, ಅಲ್ಲದೆ ಮಲೆನಾಡು ಬಾಗದಲ್ಲಿ ಮಳೆಗಾಲದಲ್ಲಿ ಬಿಸಿಲಿನ ಕೊರತೆ ಇದ್ದು ಸೋಲಾರ್ ಕಾರ್ಯ ನಿರ್ವಹಿಸುವುದಿಲ್ಲ. ಈ ಬಗ್ಗೆ ಗಮನ ಹರಿಸದ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕರು ಕೂಡಲೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ತಾಕೀತು ಮಾಡಿದರು.
ಕೋಡಿಹಳ್ಳಿ, ಹೊಸಳ್ಳಿ, ಕಾತುವಳ್ಳಿ ಗ್ರಾಮದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಯಾವುದೇ ವಾಹನ ಚಾಲನೆಗೆ ಸಾಧ್ಯವಿಲ್ಲದೆ ಜನತೆ ವಾಹನ ಸೌಕರ್ಯದಿಂದ ವಂಚಿತರಾಗಿದ್ದಾರೆ. ಕೆಲವು ಕಾಮಗಾರಿಗಳು ಈ ಹಿಂದೆ ಟೆಂಡರ್ ಆಗಿದ್ದರೂ ಕಾಮಗಾರಿ ಆರಂಭಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಆನವಟ್ಟಿ ರಸ್ತೆ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದೆ, ನೂರು ಹಾಸಿಗೆಗಳ ಉತ್ತಮ ಆಸ್ಪತ್ರೆ ಇದ್ದರೂ ವೈದ್ಯರ ಕೊರತೆಯಿಂದಾಗಿ ಗಾಯಾಳುಗಳನ್ನು ಜಿಲ್ಲಾ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ವೈದ್ಯರಿಗಾಗಿ ಹಲವಾರು ಬಾರಿ ಬೇಡಿಕೆ ಇಟ್ಟಿದ್ದರೂ, ವೈದ್ಯರ ನೇಮಕಾತಿ ಆಗದೆ ತಾಲೂಕು ವೈದ್ಯರ ಕೊರತೆ ಎದುರಿಸುವಂತಾಗಿದೆ. ಬಾರಂಗಿ ಹಾಗೂ ತತ್ತೂರು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು ಹಾಗೂ ಸಿಬ್ಬಂದಿಗಾಗಿ ಕ್ವಾರ್ಟಸ್ ನಿರ್ಮಿಸಲು ಮಂಜೂರಾತಿ ದೊರೆತಿದ್ದರೂ ಸೂಕ್ತ ಜಾಗದ ಕೊರತೆಯಿಂದಾಗಿ ವಿಳಂಬವಾಗಿದೆ. ಬಿಳುವಾಣಿ, ಚಿಟ್ಟೂರು ಶಿಗ್ಗಾ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲದೆ ರೋಗಿಗಳು ತಾಲೂಕು ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯುವಂತಾಗಿದೆ ಎಂದು ತಿಳಿಸಿದರು.
ತಾಲೂಕಿನ ಯಾವುದೇ ಶಾಲೆಯನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಈಗಾಗಲೇ 16 ಶಾಲೆಗಳ ಕೊಠಡಿಗಳ ನಿರ್ಮಾಣವಾಗುತ್ತಿದೆ. 47 ಶಾಲೆಗಳ ಮೇಲ್ಚಾವಣಿ ಹಾಗೂ ನೆಲವನ್ನು 92 ಲಕ್ಷ ರೂ. ವೆಚ್ಛದಲ್ಲಿ ದುರಸ್ತಿ ಮಾಡಲಾಗುತ್ತಿದೆ. ಆನವಟ್ಟಿಗೆ ಪಬ್ಲಿಕ್ ಸ್ಕೂಲ್ ಯೋಜನೆ ಮಂಜೂರಾಗಿದ್ದು 1 ರಿಂದ 12 ನೇ ತರಗತಿ ಶಾಲೆಗಳು ಒಂದೇ ವ್ಯಾಪ್ತಿಯಲ್ಲಿ ಶಿಕ್ಷಣ ನೀಡಲು ಸರಕಾರ ನಿರ್ಧರಿಸಿದ್ದು ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಕಾರಿ ನಿಯಮದ ಪ್ರಕಾರ ಒಂದು ಕಟ್ಟಡಕ್ಕೆ 30 ವರ್ಷ ಮಾತ್ರ ಆಯಸ್ಸು ಇದ್ದು ಶಿಥಿಲಗೊಂಡ ಯಾವುದೇ ಕಟ್ಟಡಗಳ ಮಾಹಿತಿ ನೀಡುವಂತೆ ಪರಿಹಾರ ಮಂಜೂರಾತಿ ಆಗಲಿದೆಯೆಂದು ತಿಳಿಸಿದರು.
ಪಬ್ಲಿಕ್ ಸ್ಕೂಲ್ ಮರೀಚಿಕೆಯಾಗಿದ್ದು ಖಾಸಗಿ ಶಾಲೆಗಳ ಅವಾಂತರದಿಂದಾಗಿ ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ. ಶಿಕ್ಷಕರು ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಯತ್ನಿಸಬೇಕು ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಜಿಪಂ ಸದಸ್ಯರಾದ ಶಿವಲಿಂಗೇಗೌಡ, ರಾಜೇಶ್ವರಿ ಗಣಪತಿ, ತಾರಾ ಶಿವಾನಂದ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಗೌಡ, ಇಒ ಬಸವರಾಜ್ ಹೆಗ್ಗ ನಾಯ್ಕ, ಹಾಗೂ ಇಲಾಖಾ ಅಧಿಕಾರಿಗಳು ಇದ್ದರು.