ಮೈಸೂರು: ದಲಿತರ ಭೂಮಿ ಉಳಿವಿಗಾಗಿ ಅರೆಬೆತ್ತಲೆ ಪ್ರತಿಭಟನೆ

Update: 2018-07-25 15:25 GMT

ಮೈಸೂರು,ಜು.25: ದಲಿತರ ಭೂಮಿ ಉಳಿವಿಗಾಗಿ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರ ಭೂ ಹೋರಾಟ ಸಮಿತಿ ವತಿಯಿಂದ ಬುಧವಾರ ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಯಿತು.

ನಗರದ ಕೋರ್ಟ್ ಮುಂಭಾಗವಿರುವ ಗಾಂಧಿಪ್ರತಿಮೆಯಿಂದ ಹೊರಟ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಧರಣಿ ನಡೆಸಿತು. ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕರ್ನಾಟಕದಲ್ಲಿ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ 1976 ಅಡಿ ಕಳೆದ 40 ವರ್ಷಗಳಿಂದಲೂ ದೌರ್ಜನ್ಯಕ್ಕೆ ತುತ್ತಾಗಿರುವ 245 ವೀಳ್ಯದೆಲೆ ಬೆಳೆಗಾರರಿಗೆ ಮೈಸೂರು ಮಹಾನಗರ ಪಾಲಿಕೆಯು ಕೂಡಲೇ ಹಕ್ಕು ಪತ್ರ ವಿತರಿಸುವಂತೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕು.

ಅನುಸೂಚಿತ ಜಾತಿ, ಅನುಸೂಚಿತ ಬುಡಕಟ್ಟುಗಳ ಪರಭಾರೆ ನಿಷೇಧ ಕಾಯ್ದೆ 1976ರನ್ನು ಸಂಪೂರ್ಣ ಉಲ್ಲಂಘಿಸಿ 4ಉಪಕಲಂ (1)ಮತ್ತು (1)ಎ(1)ಬಿ ಪ್ರಕಾರ ಅಕ್ರಮವಾಗಿ ನೋಂದಣಿಯಾಗಿರುವ, ಕ್ರಯಗೊಂಡಿರುವ ಹಾಗೂ ನ್ಯಾಯಾಲಯದ ತಕರಾರಿನಲ್ಲಿರುವ ಎಲ್ಲಾ ದಲಿತರ ಭೂಮಿಯನ್ನು ಜಿಲ್ಲಾಧಿಕಾರಿಗಳು ವಜಾಗೊಳಿಸಿ ಅವರಿಗೆ ಮರುಗೇಣಿದಾರರಾಗಿ ಮಾಡಿ ಆದೇಶ ಹೊರಡಿಸಬೇಕು. 2006-07 ಸುತ್ತೋಲೆ ಆರ್ ಎನ್ ಜಿ 259ರನ್ವಯ ಕೃಷಿ ಭೂಮಿಯನ್ನು ಪರಿವರ್ತನೆ ಮಾಡದೆ ಮಾರಾಟ ಮಾಡುವಂತಿಲ್ಲ. ಅಂತಹ ಕೃತ್ಯಗಳಲ್ಲಿ ಮೂರು ವರ್ಷ ಜೈಲು ಹಾಗೂ 10ಸಾವಿರ ದಂಡ ವಿಧಿಸುವ ಶಿಕ್ಷೆಯಿದ್ದು, ವೀಳ್ಯದೆಲೆ ತೋಟಗಳಲ್ಲಿ ನಡೆದಿರುವ ಇಂತಹ ಅಕ್ರಮಗಳನ್ನು ಜಿಲ್ಲಾಡಳಿತ ಕ್ರಮಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು. 

ಮೈಸೂರು ನಗರದ ವೀಳ್ಯದೆಲೆ ಭೂಮಿಗಳಲ್ಲಿ ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಖಾಸಗಿ ಕಟ್ಟಡಗಳನ್ನು ಕೂಡಲೇ ಜಿಲ್ಲಾಡಳಿತವು ತೆರವುಗೊಳಿಸಬೇಕು. ದಲಿತರ ವೀಳ್ಯದೆಲೆ ಭೂಮಿಯನ್ನು ಖರೀದಿಸಿರುವ ಹಾಗೂ ಅತಿಕ್ರಮಿಸಿಕೊಂಡಿರುವ ಭೂಮಾಫಿಯಾದವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸುಮಾರು 25 ಮಂದಿಗೆ ಚಿಕ್ಕ ಕಾಟೂರಿನಲ್ಲಿ ಬದಲಿ ಭೂಮಿ ನೀಡಿರುವ ಸರ್ಕಾರ ಸದರಿ ಭೂಮಿಯಲ್ಲಿರುವ ಅತಿಕ್ರಮಣಕಾರರನ್ನು ತೆರವುಗೊಳಿಸಿ ವೀಳ್ಯದೆಲೆ ಬೆಳೆಗಾರರಿಗೆ ಬೆಳೆಬೆಳೆಯಲು ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ, ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಿಮಠ ಜ್ಞಾನಪ್ರಕಾಶ್ ಸ್ವಾಮೀಜಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಸಂಚಾಲಕ ಶಂಭುಲಿಂಗಸ್ವಾಮಿ, ಈಶ್ವರ್ ಚಕ್ಕಡಿ, ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ವೆಂಕಟೇಶ್, ಪಿ.ಕುಮಾರ್, ಚಳವಳಿ ಚಿದು, ವಿಜಯ್ ಶಂಕರ್, ಪರಮೇಶ್ವರ್, ಪುರುಷೋತ್ತಮ್, ರಾಮರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ದೇಶದ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದು, ಈ ಬಗ್ಗೆ ದಲಿತರು ಜಾಗೃತರಾಗಬೇಕು. ಸುಮಾರು ಎರಡು ತಲೆಮಾರುಗಳಿಂದ ವೀಳ್ಯೆದೆಲೆ ಬೆಳೆದು ಜೀವನ ನಡೆಸುತ್ತಿದ್ದ ದಲಿತರ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯತ್ತಿದ್ದು, ಸರಕಾರ ಕೂಡಲೆ ಎಚ್ಚೆತ್ತು ಹಕ್ಕುಪತ್ರ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿ ಮಠ

ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಭೂಮಿ ಕಳೆದುಕೊಂಡ ವೀಳ್ಯದೆಲೆ ಬೆಳೆಗಾರರಿಗೆ ಹಕ್ಕುಪತ್ರ ನೀಡಲು ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಕೈಗೊಂಡಿದ್ದರು. ಅಷ್ಟರಲ್ಲಿ ಚುನಾವಣೆ ಘೋಷಣೆಯಾದ್ದರಿಂದ ಸಾಧ್ಯವಾಗಲಿಲ್ಲ, ಚುನಾವಣೆ ಮುಗಿದ ಮೇಲೆ ಅಧಿಕಾರಿಗಳು ಮತ್ತೊಂದು ಸರ್ವೆ ಮಾಡಿಸಿ ನಂತರ ಇದನ್ನು ಪರಿಶೀಲಿಸಲಾಗುವುದು ಎಂದು ಹೇಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಮಾಫಿಯಾದವರ ಕೈವಾಡ ಇದರಲ್ಲಿ ಅಡಗಿದೆ. ಜೊತೆಗೆ ನಮ್ಮಲ್ಲೇ ಗೊಂದಲವುಂಟು ಮಾಡುವ ಪ್ರಯತ್ನ ಕೂಡ ನಡೆಯುತ್ತಿದೆ.
-ಜಯಶಂಕರ್, ವೀಳ್ಯದೆಲೆ ಬೆಳೆಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News