ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್‌ಗೆ ಹೈಕೋರ್ಟ್ ನೋಟಿಸ್

Update: 2018-07-25 15:44 GMT

ಬೆಂಗಳೂರು, ಜು.25: ಮತಯಂತ್ರದ ಲೋಪದಿಂದ ಜಯಗಳಿಸಿದ ಆರೋಪ ಕುರಿತು ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಡಿ.ವೇದವ್ಯಾಸ ಕಾಮತ್ ಅವರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಡಿ. ವೇದವ್ಯಾಸ ಕಾಮತ್ ವಿರುದ್ಧ ಪರಾಜಿತ ಅಭ್ಯರ್ಥಿ ಜಾನ್ ರಿಚರ್ಡ್ ಲೋಬೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅರ್ಜಿಯಲ್ಲಿನ ಇತರೆ ಒಂಭತ್ತು ಮಂದಿ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.

ಮಂಗಳೂರು ನಗರ ದಕ್ಷಿಣ ಕ್ಷೇತ್ರದಿಂದ ವೇದವ್ಯಾಸ ಕಾಮತ್ ಅವರ ಗೆಲುವನ್ನು ಪ್ರಶ್ನಿಸಿರುವ ಜೆ.ಆರ್.ಲೋಬೋ, 'ಮತ ಎಣಿಕೆ ಕಾರ್ಯದಲ್ಲಿ ಏರುಪೇರಾಗಿದೆ. ಮತ್ತೊಂದೆಡೆ ಕಾಮತ್ ಅವರ ಪತ್ನಿ, ಚುನಾವಣೆ ಪ್ರಚಾರದ ವೇಳೆ ಹಿಂದುತ್ವದ ಉಳಿವಿಗಾಗಿ ತಮ್ಮ ಪತಿಗೆ ಮತ ಹಾಕುವಂತೆ ಮತದಾರರನ್ನು ಕೇಳಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ. ಹೀಗಾಗಿ, ಕಾಮತ್ ಅವರ ಆಯ್ಕೆಯನ್ನು ರದ್ದುಪಡಿಸಬೇಕು ಹಾಗೂ ಮುಂದಿನ ಚುನಾವಣೆಯಲ್ಲಿ ಮತಪತ್ರ ಬಳಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಬೇಕು' ಎಂದು ಕೋರಿದ್ದಾರೆ. ಲೋಬೋ ಪರ ವಕೀಲ ರವೀಂದ್ರನಾಥ ಕಾಮತ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News