ಕೋಲಾರದ ಎರಗೋಡು ನೀರಾವರಿ ಕಾಮಗಾರಿ ವಿಳಂಬ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2018-07-25 16:36 GMT

ಬೆಂಗಳೂರು, ಜು.25: ಕೋಲಾರ ಜಿಲ್ಲೆಯ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಎರಗೋಡು ನೀರಾವರಿ ಯೋಜನೆ ಕಾಮಗಾರಿಯ ವಿಳಂಬಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಕಾಮಗಾರಿ ವಿಳಂಬ ವಿರುದ್ಧ ಹ್ಯೂಮನ್ ರೈಟ್ಸ್ ರಿಸರ್ಚ್ ಇನ್ಸ್‌ಟಿಟ್ಯೂಷನ್ ಮತ್ತು ಕೋಲಾರ ವಕೀಲರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ವಿಭಾಗೀಯ ಪೀಠ, ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ವಾದ ಮಂಡಿಸಿ, 2007ರಲ್ಲಿಯೇ ಎರಗೋಡು ನೀರಾವರಿ ಯೋಜನೆಯನ್ನು ಸರಕಾರ ಕೈಗೊಂಡಿತ್ತು. ಈ ಯೋಜನೆ ಮೂಲಕ ಬಂಗಾರಪೇಟೆ, ಕೋಲಾರ ಮತ್ತು ಮಾಲೂರು ಪಟ್ಟಣ ಸೇರಿದಂತೆ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ. 2010ರಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಮ್‌ಕಿ ಇಂಜಿನಿಯರಿಂಗ್ ಸಂಸ್ಥೆಯು ವಿವಿಧ ಕಾರಣಗಳಿಂದ ಕಾಮಗಾರಿಯನ್ನು ಮುಂದುವರಿಸುತ್ತಿಲ್ಲ. ಮತ್ತೊಂದೆಡೆ ಸರಕಾರವೂ ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಯೋಜನೆಗೆ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಆಗಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ವಿವರಿಸಿದರು.

ಅಲ್ಲದೆ, ಕೆ.ಸಿ.ವ್ಯಾಲಿಯಿಂದ ಮಲಿನಗೊಂಡ ನೀರನ್ನು ಕೆರೆಗಳಿಗೆ ಹರಿಸಲಾಗುತ್ತಿದೆ. ಇದರಿಂದ ಇನ್ನಷ್ಟು ತೊಂದರೆಯಾಗಲಿದೆ ಎಂದು ಇದೇ ವೇಳೆ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿಗಳು, ಕೋಲಾರಕ್ಕೆ ನೀರು ಪೂರೈಸುವ ಕೆಲಸವನ್ನು ಸರಕಾರ ಮಾಡುತ್ತಿದೆಯಲ್ಲಾ. ಆದರೆ, ಜನರು ಆ ನೀರು ಕುಡಿಯುತ್ತಿಲ್ಲ. ಒಂದೊಮ್ಮೆ ಆ ನೀರು ಕುಡಿದರೆ ಜನರಿಗೆ ರೋಗ ನಿರೋಧಕ ಶಕ್ತಿ ಬರಬಹುದು. ನಂತರ ಮೊದಲಿಗೆ ದೈಹಿಕ, ಮಾನಸಿಕ ನಿರೋಧಕ ಶಕ್ತಿ, ಬಳಿಕ ಪ್ರಪಂಚವೇ ನಶ್ವರ ಎನ್ನಿಸಬಹುದು ಎಂದು ಕೆ.ಸಿ.ವ್ಯಾಲಿ ಯೋಜನೆಯ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ತದನಂತರ ರಾಜ್ಯ ಸರಕಾರವು ಇದೀಗ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ. ಆಗಸ್ಟ್ 1ರವರೆಗೆ ಕಾದು ನೋಡೋಣ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿಗಳು ವಿಚಾರಣೆಯನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News