ಹನೂರು: ರೈತ ಸಂಘದ ವತಿಯಿಂದ ಅನಿರ್ಧಿಷ್ಟಾವಧಿ ಧರಣಿ

Update: 2018-07-25 16:53 GMT

ಹನೂರು,ಜು.25: ರೈತರಿಗೆ ಸರ್ಕಾರದಿಂದ ಸಿಗುವ ಸಾಲಸೌಲಭ್ಯಗಳನ್ನು ನೀಡಲು ಇಲ್ಲಿನ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಒತ್ತಾಯಿಸಿದ್ದಾರೆ 

ಹನೂರು ಸಮೀಪದ ಸೂಳೇರಿಪಾಳ್ಯ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೂಳೇರಿಪಾಳ್ಯದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇಲ್ಲಿನ ರೈತರಿಗೆ ಹಲವು ವರ್ಷಗಳಿಂದ ಅನ್ಯಾಯಗಳನ್ನು ಮಾಡಿಕೂಂಡು ಬಂದಿದ್ದು, ಶೇರುದಾರರಿಗೆ ಸಾಲ ಕೇಳಿದರೆ ಪೂರಕ ದಾಖಲಾತಿಗಳನ್ನು ನೀಡಿ ಎಂದು ಹೇಳುತ್ತಾರೆ. ಆದರೆ ಪೂರಕ ದಾಖಲಾತಿಗಳನ್ನು ನೀಡಿದರೆ ತಮಗೆ ಬೇಕಾದವರಿಗೆ ಮಾತ್ರ ಸಾಲ ಸೌಲಭ್ಯವನ್ನು ನೀಡಿ ರೈತರ ಜೀವನದಲ್ಲಿ  ರಾಜಕೀಯ ಮಾಡುತ್ತಿದ್ದಾರೆ ಮತ್ತು ನೂತನ ಶೇರುದಾರರಿಗೆ ಆಹ್ವಾನವನ್ನೇ ನೀಡಿಲ್ಲ. ನಿಗದಿತ ವೇಳೆಗೆ ಬ್ಯಾಂಕ್ ತೆರೆಯುತ್ತಿಲ್ಲ. ನಿರ್ದೇಶಕರುಗಳ ಸಭೆ ಮಾಡಿ ವರ್ಷಗಳೇ ಕಳೆದಿದೆ. ಇಲ್ಲಿ ಬ್ಯಾಂಕ್ ಎಂದು ತಿಳಿಯಲು ಸೂಕ್ತವಾದ ನಾಮಫಲಕವೂ ಸಹ ಇಲ್ಲ. ಸಾಲ ಸೌಲಭ್ಯ ಪಡೆಯಲು ಸುತ್ತ ಮುತ್ತಲಿನ ಗ್ರಾಮಗಳಿಂದ ಬರುವ ರೈತರು ದಿನನಿತ್ಯ ನಿರಾಶೆಯಿಂದ ಹಿಂದಿರುಗಬೇಕಾಗಿದೆ. ಇಲ್ಲಿನ ಕಾರ್ಯದರ್ಶಿ ಸಾಲ ನೀಡುವಾಗ ಮತ್ತು ಅದನ್ನು ಮರುಪಾವತಿ ಮಾಡುವಾಗ ರೈತರಿಂದ ಎರಡರಿಂದ ಮೂರು ಸಾವಿರ ಹಣ ತೆಗೆದುಕೊಳ್ಳುತ್ತಿದ್ದಾರೆ. ಹಣ ನೀಡದಿದ್ದರೆ ನಿಮ್ಮ ದಾಖಲಾತಿ ಸರಿಯಿಲ್ಲ ಎಂದು ನಾನಾ ಕಾರಣಗಳನ್ನು ಹೇಳಿ ಕಳುಹಿಸುತ್ತಾರೆ. ಕಾರ್ಯದರ್ಶಿಗೆ ಹಣ ನೀಡಿದರೆ ಯೋಗ್ಯವಲ್ಲದ ಕೃಷಿ ಭೂಮಿಗೆ ಸಾಲ ಸೌಲಭ್ಯ ನೀಡಲು ಮುಂದಾಗುತ್ತಾರೆ ಎಂದು ಆರೋಪಿಸಿದರು.

ಈ ಸಂದರ್ಭ ಶಿವರಾಮು, ಶ್ರೀನಿವಾಸ್ ಮೂರ್ತಿ, ಗೋವಿಂದಗೌಡ, ವೆಂಕಟಚಲ ವಿನೋದ್, ರವಿ, ಸತೀಶ್, ಜಡೆಯಾ, ಇರಸೇಗೌಡ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News