ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಟಿಕೆಟ್ ಹಂಚಿಕೆಯಲ್ಲಿ ಬಿಎಸ್‌ವೈ- ಈಶ್ವರಪ್ಪ ಬಣಗಳ ನಡುವೆ ಪೈಪೋಟಿ !

Update: 2018-07-25 17:25 GMT

ಶಿವಮೊಗ್ಗ, ಜು. 25: ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್‌ಗಳಿಗೆ, ಇತ್ತೀಚೆಗೆ ರಾಜ್ಯ ಸರಕಾರ ಮೀಸಲಾತಿ ನಿಗದಿಪಡಿಸಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಇಷ್ಟರಲ್ಲಿಯೇ ಚುನಾವಣಾ ದಿನಾಂಕ ಪ್ರಕಟವಾಗುವ ನಿರೀಕ್ಷೆಗಳಿವೆ. ಈ ನಡುವೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗಳಲ್ಲಿ ವಾರ್ಡ್‌ವಾರು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗಳು ಚುರುಕುಗೊಳ್ಳಲಾರಂಭಿಸಿದೆ.

ಬಹುತೇಕ ಎಲ್ಲ ಪಕ್ಷಗಳಲ್ಲಿಯೂ ಸ್ಪರ್ಧಾಕಾಂಕ್ಷಿಗಳ ದೊಡ್ಡ ದಂಡೇ ಕಂಡುಬರುತ್ತಿದೆ. ಟಿಕೆಟ್‌ಗೆ ಭಾರೀ ಪೈಪೋಟಿಯಿದೆ. ಈ ನಡುವೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಕೈವಶ ಮಾಡಿಕೊಂಡಿರುವ ಬಿಜೆಪಿ, ಶತಾಯಗತಾಯ ಮಹಾನಗರ ಪಾಲಿಕೆ ಆಡಳಿತದ ಗದ್ದುಗೆಯೇರಲು ಕಸರತ್ತು ನಡೆಸುತ್ತಿದೆ. ಸ್ವತಃ ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರೇ ಪಾಲಿಕೆ ಚುನಾವಣೆಯತ್ತ ಗಮನಹರಿಸಿದ್ದಾರೆ. ‘25 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಬೇಕು. ಸ್ವತಂತ್ರವಾಗಿ ಅಧಿಕಾರಕ್ಕೇರಬೇಕು. ಈ ನಿಟ್ಟಿನಲ್ಲಿ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಕರೆ ನೀಡಿರುವ ಯಡಿಯೂರಪ್ಪ, ತಮ್ಮ ಕಟ್ಟಾ ಬೆಂಬಲಿಗ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮತ್ತು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌ಗೆ ಪಾಲಿಕೆ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ನೀಡಿದ್ದಾರೆ. ಈ ವಿಷಯವನ್ನು ಪಕ್ಷದ ಸಭೆಯಲ್ಲಿಯೇ ಬಿಎಸ್‌ವೈ ಪ್ರಕಟಿಸಿದ್ದರು.

ಬಿಎಸ್‌ವೈ ಅವರ ಈ ಘೋಷಣೆಯು ಬಿಜೆಪಿ ಪಾಳಯದಲ್ಲಿ ನಾನಾ ರೀತಿಯ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವಿಶೇಷವಾಗಿ ಈಶ್ವರಪ್ಪಬಣದಲ್ಲಿ ತಲ್ಲಣವನ್ನುಂಟು ಮಾಡಿದೆ. ಇನ್ನೊಂದೆಡೆ ಎಸ್.ರುದ್ರೇಗೌಡ-ಆಯನೂರು ಮಂಜುನಾಥ್‌ಗೆ ಚುನಾವಣೆಯ ಜವಾಬ್ದಾರಿ ವಹಿಸಿರುವುದರಿಂದ, ಬಿಎಸ್‌ವೈ ಬಣದಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ಹಂಚಿಕೆಯಲ್ಲಿ ಪ್ರಾತಿನಿಧ್ಯ ಸಿಗಲಿದೆಯೇ? ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

ಈಶ್ವರಪ್ಪ ತಯಾರಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಲು ಸ್ಥಳೀಯ ಶಾಸಕ ಈಶ್ವರಪ್ಪ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಪ್ರಸ್ತುತ ಪಾಲಿಕೆ ಚುನಾವಣೆಯಲ್ಲಿಯೂ ಅತ್ಯದಿಕ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ನಗರಾದ್ಯಂತ ಬಿರುಸಿನ ಓಡಾಟ ನಡೆಸುತ್ತಿರುವ ಅವರು, ಹಲವು ಅಭಿವೃದ್ಧಿ ಕಾಮಗಾರಿಗಳ ಚಾಲನೆಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಯಾವ್ಯಾವ ವಾರ್ಡ್‌ಗಳಿಂದ ಯಾರನ್ನು ಕಣಕ್ಕಿಳಿಸಬೇಕೆಂಬ ಚರ್ಚೆ ಕೂಡ ತಮ್ಮ ಆಪ್ತರ ಬಳಿ ನಡೆಸಲಾರಂಭಿಸಿದ್ದು, ಟಿಕೆಟ್ ಹಂಚಿಕೆಯಲ್ಲಿ ತಮ್ಮ ಆಪ್ತೇಷ್ಟರಿಗೆ ಹೆಚ್ಚಿನ ಅವಕಾಶ ಸಿಗುವ ನಿಟ್ಟಿನಲ್ಲಿ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಈಗಾಗಲೇ ಕಣಕ್ಕಿಳಿಯುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಈಶ್ವರಪ್ಪ ಬಣ ಸಿದ್ಧಪಡಿಸಿದೆ ಎಂಬಿತ್ಯಾದಿ ಮಾತುಗಳು ಸ್ಥಳೀಯ ಬಿಜೆಪಿ ಪಾಳೇಯದಿಂದ ಕೇಳಿ ಬಂದಿದ್ದವು.

ಪ್ರಾಬಲ್ಯಕ್ಕೆ ಕಸರತ್ತು: ಈ ನಡುವೆ ಯಡಿಯೂರಪ್ಪ ಬಣ ಕೂಡ ಪ್ರತಿ ತಂತ್ರಗಾರಿಕೆ ರೂಪಿಸಲಾರಂಭಿಸಿತ್ತು. ಟಿಕೆಟ್ ಹಂಚಿಕೆಯಲ್ಲಿ ಈಶ್ವರಪ್ಪ ಬಣದ ಕೈ ಮೇಲಾಗದಂತೆ ಕಾರ್ಯತಂತ್ರ ನಡೆಸಲಾರಂಭಿಸಿತ್ತು. ಈ ಕಾರಣದಿಂದಲೇ ಬಣದ ಪ್ರಮುಖರು ಬಿಎಸ್‌ವೈರೊಂದಿಗೆ ಗೌಪ್ಯ ಸಮಾಲೋಚನೆ ನಡೆಸಿದ್ದರು ಎನ್ನಲಾಗಿದೆ. ಈ ಎಲ್ಲ ಕಾರಣಗಳಿಂದ ಬಿಎಸ್‌ವೈ ಅವರು ಪಾಲಿಕೆ ಚುನಾವಣೆಯ ಜವಾಬ್ದಾರಿಯನ್ನು ತಮ್ಮ ಆಪ್ತೇಷ್ಟರಾದ ಎಸ್.ರುದ್ರೇಗೌಡ ಹಾಗೂ ಆಯನೂರು ಮಂಜುನಾಥ್‌ಗೆ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.

‘ಶಿವಮೊಗ್ಗ ಪಾಲಿಕೆಯ 35 ವಾರ್ಡ್‌ಗಳಲ್ಲಿ, ಟಿಕೆಟ್ ಹಂಚಿಕೆಯ ವೇಳೆ ತಮ್ಮ ಬಣದವರಿಗೆ ಹೆಚ್ಚಿನ ಆದ್ಯತೆ ಸಿಗುವ ನಿಟ್ಟಿನಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣದವರು ಪೈಪೋಟಿ ನಡೆಸುತ್ತಿರುವುದು ನಿಜ. ಎಲ್ಲ ಪಕ್ಷಗಳಲ್ಲಿಯೂ ಸಹಜವಾಗಿಯೇ ಪೈಪೋಟಿ ಇರುತ್ತದೆ. ಆದರೆ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸರ್ವಸಮ್ಮತವಾಗಿ ನಡೆಯಲಿದೆ. ಅರ್ಹರಿಗೆ, ಗೆಲ್ಲುವ ಸಾಮರ್ಥ್ಯ ಇರುವವರಿಗೆ ಟಿಕೆಟ್ ಹಂಚಿಕೆ ಮಾಡಲಾಗುವುದು. ಈ ಬಾರಿ ಪಾಲಿಕೆಯ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಇದರಲ್ಲಿ ಯಾವುದೇ ಅನುಮಾನವಿಲ್ಲ.’ ಎಂದು ಹೆಸರು ಬಹಿರಂಗಪಡಿಲಿಚ್ಚಿಸದ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಡುತ್ತಾರೆ.

ಶಿವಮೊಗ್ಗ ಪಾಲಿಕೆಯ 35 ವಾರ್ಡ್‌ಗಳಿಗೂ ಪಕ್ಷದ ಸಕ್ರಿಯ ಕಾರ್ಯಕರ್ತರು, ನಿಷ್ಠಾವಂತರು ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆ ಮಾಡಲಾಗುವುದು. ಪ್ರಭಾವ, ಲಾಬಿ, ಒತ್ತಡ ತಂದವರಿಗೆ ಟಿಕೆಟ್ ನೀಡುವುದಿಲ್ಲ. ಹಾಗೆಯೇ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಪಕ್ಷಕ್ಕೆ ಆಗಮಿಸುವವರಿಗೂ ಟಿಕೆಟ್ ನೀಡುವುದಿಲ್ಲ. ಈ ವಿಷಯದಲ್ಲಿ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ, ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.

-ಮಂಜುನಾಥ ಭಂಡಾರಿ, ಕೆಪಿಸಿಸಿ ಉಪಾಧ್ಯಕ್ಷ

ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಪಕ್ಷಕ್ಕೆ ಅತ್ಯಂತ ಮಹತ್ವ ದ್ದಾಗಿದೆ. ಅತ್ಯಧಿಕ ಸ್ಥಾನಗಳಲ್ಲಿ ಜಯ ಸಾಧಿಸಲು ಪಕ್ಷ ಕಾರ್ಯತಂತ್ರ ರೂಪಿಸುತ್ತಿದೆ. ಪ್ರತಿಯೊಂದು ವಾರ್ಡ್ ನಲ್ಲಿಯೂ ಪಕ್ಷದ ನಿಷ್ಠಾವಂತರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು. ಲಾಬಿಗೆ ಅವಕಾಶ ನೀಡುವುದಿಲ್ಲ. ಪಕ್ಷದ ಪ್ರಮುಖರು ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಿದ್ದಾರೆ.

-ಎಂ. ಶ್ರೀಕಾಂತ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

ಶಿವಮೊಗ್ಗ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‌ಗಳಿಗೆ ಸರ್ವಸಮ್ಮತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈ ವಿಷಯದಲ್ಲಿ ಸ್ಥಳೀಯ ಶಾಸಕರಾದ ಕೆ.ಎಸ್.ಈಶ್ವರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಎಂಎಲ್‌ಸಿ ಆಯನೂರು ಮಂಜುನಾಥ್ ಸೇರಿದಂತೆ ಪಕ್ಷದ ಕೋರ್ ಕಮಿಟಿ ಸದಸ್ಯರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾವುದೇ ಬಣಗಳೂ ಪಕ್ಷದಲ್ಲಿಲ್ಲ. ಬಿಜೆಪಿ ಬಣ ಮಾತ್ರವಿದೆ. ಪಾಲಿಕೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರದ ಗದ್ದುಗೆಯೇರಲಿದೆ. ಈ ವಿಷಯದಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ನಗರದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ.
-ಬಿ.ವೈ.ರಾಘವೇಂದ್ರ, ಬಿಜೆಪಿಯ ಮಾಜಿ ಶಾಸಕ

Writer - ವರದಿ : ಬಿ.ರೇಣುಕೇಶ್

contributor

Editor - ವರದಿ : ಬಿ.ರೇಣುಕೇಶ್

contributor

Similar News