×
Ad

ಕೆರೆಗಳ ಪುನರುಜ್ಜೀವನ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಆರೋಪ

Update: 2018-07-25 23:38 IST

ಚಿಕ್ಕಮಗಳೂರು, ಜು.25: 2010-11ನೇ ಸಾಲಿನಲ್ಲಿ ಕೆರೆಗಳ ಪುನರುಜ್ಜೀವನ ಕಾಮಗಾರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಇದರ ಬಗ್ಗೆ ತನಿಖೆ ನಡೆಸಿ ಲೋಕಾಯುಕ್ತಕ್ಕೆ ವರದಿ ನೀಡುವಂತೆ ಸಣ್ಣ ನೀರಾವರಿ ಇಲಾಖೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ನಾಲ್ಕು ವರ್ಷ ಕಳೆದರೂ ತನಿಖೆ ನಡೆಸಿ ವರದಿ ನೀಡಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಎಂ.ಮಂಜುನಾಥ್ ಆರೋಪಿಸಿದರು.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ 228 ಕೆರೆಗಳ ಹೂಳು ತೆಗೆಯಲು ಯೋಜನೆ ರೂಪಿಸಿ ಕಟ್ಟುನಿಟ್ಟಿನ ಮಾರ್ಗಸೂಚಿ ತಯಾರಿಸಿ ಭ್ರಷ್ಟಚಾರಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಮಾರ್ಗಸೂಚಿ ನಿಯಮಗಳನ್ನು ಕಡೆಗಳಿಸಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ. ಕೆಲ ಕಡೆಗಳಲ್ಲಿ ಕಾಮಗಾರಿ ನಡೆಸದೆ ಗುತ್ತಿಗೆದಾರ ಹಣ ಪಡೆದುಕೊಂಡಿದ್ದಾನೆ. ಕೆರೆ ಹೂಳು ಎತ್ತುವ ಕಳಪೆ ಕಾಮಗಾರಿ ಗಮನಿಸಿ 2014ರಲ್ಲಿ ಅಂದಿನ ಲೋಕಾಯುಕ್ತ ನ್ಯಾಯಾಧೀಶ ವೈ. ಭಾಸ್ಕರ್ ರವರು ಜಿಲ್ಲೆಗೆ ಭೇಟಿನೀಡಿದಾಗ ದೂರು ನೀಡಲಾಗಿತ್ತು. ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ತನಿಖೆ ನಡೆಸಿ ವರದಿ ನೀಡಿಲ್ಲ ಎಂದರು.

ಸಣ್ಣ ನೀರಾವರಿ ಇಲಾಖೆಯಿಂದ ತನಿಖಾ ತಂಡ ಕೆರೆಗಳ ತನಿಖೆಗೆ ಹತ್ತಾರು ಬಾರಿ ಬಂದರೂ ತನಿಖೆ ನಡೆಸದೆ ವಾಪಾಸ್ ಆಗಿವೆ ಎಂದು ದೂರಿದ ಅವರು, ಹಂಪಾಪುರ ತೂಬು ಕೆರೆಯ ಕಾಮಗಾರಿಯಲ್ಲಿ 31543 ಚದರ ಮೀಟರ್ ವಿಸ್ತೀರ್ಣದಲ್ಲಿ 68 ಸೆ. ಮೀ. ಆಳ ಮೀರದಂತೆ  21388 ಘನ ಮೀ. ಹೂಳು ತೆಗೆಯಲು ಅಂದಾಜಿಸಲಾಗಿತ್ತು. ಆದರೆ 13000 ಚ.ಮೀ. ವಿಸ್ತೀರ್ಣದಲ್ಲಿ22000 ಘನ ಮೀ. ಹೂಳು ತೆಗೆದಿರುವುದಾಗಿ ದಾಖಲಿಸಿ ಬಿಲ್ ಮಾಡಿಕೊಳ್ಳಲಾಗಿದೆ ಎಂದ ಅವರು, ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಹೂಳು ತೆಗೆದಂತೆ ಬಿಂಬಿಸಲಾಗಿದೆ. ಅದೇ ರೀತಿ ಕಲ್ಲಳ್ಳಿಕಟ್ಟೆ ಕೆರೆ ಮತ್ತು ಚಿಕ್ಕನಹಳ್ಳಿ ಕೆರೆಗಳಲ್ಲಿ ಅಕ್ರಮ ನಡೆಸಲಾಗಿದೆ ಎಂದರು.

68 ಸೆ.ಮೀ. ಹೂಳು ತಗೆಯಲು ಅವಕಾಶವಿದೆ. ಆದರೆ 2.10 ಮೀಟರ್ ಹೂಳು ತೆಗೆಯಲಾಗಿದೆ. ಇದು ಕಾನೂನು ಬಾಹಿರ ಎಂದ ಅವರು, ಎಂಟು ದಿನಗಳಲ್ಲಿ ಕೆರೆ ಕಾಮಗಾರಿಯಲ್ಲಿ ಆಗಿರುವ ಅಕ್ರಮದ ತನಿಖೆ ನಡೆಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಲೋಕಾಯುಕ್ತ ಕಚೇರಿ ಎದುರು ಚಳುವಳಿ ನಡೆಸುವುದಾಗಿ ಎಚ್ಚರಿಸಿದರು.

ತಾಲೂಕು ಪಂಚಾಯತ್ ಗಳಲ್ಲಿ ಅನೇಕ ಕಡತಗಳು ಕಳುವಾಗಿವೆ. ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆ ಡಿ.ಜಿಯವರಿಗೂ ದೂರು ದಾಖಲಿಸಲಾಗಿತ್ತು. ಡಿ.ಜಿ.ಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆದೇಶ ನೀಡಿದ್ದರು. ಆದರೆ ಇದುವರೆಗೂ ಕಡತ ಕಳವು ಪ್ರಕರಣದ ದೂರು ದಾಖಲಿಸಿ ತನಿಖೆ ನಡೆಸಿಲ್ಲ. ತಕ್ಷಣ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಅವರು, ವಿಳಂಬ ಮಾಡಿದಲ್ಲಿ ಡಿ.ಜಿ. ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ರೈತ ಸಂಘದ ಎಂ.ಸಿ. ಬಸವರಾಜ್ ಮಾತನಾಡಿ, ಮಲೆನಾಡು ಭಾಗದಲ್ಲಿ ಸುರಿದ ಬಾರೀ ಮಳೆಗೆ ರೈತರು ಬೆಳೆದ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ತಕ್ಷಣ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಒತ್ತಾಯಿಸಿದರು. 

ಸುದ್ದಿಗೋಷ್ಠಿಯಲ್ಲಿ ಎಂ.ಆರ್.ಪರಮೇಶ್ವರ್, ಚಂದ್ರೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News