ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಸೂಚನೆ ಅಗತ್ಯವಿಲ್ಲ: ಡಿಸಿಎಂ ಪರಮೇಶ್ವರ್

Update: 2018-07-25 18:25 GMT

ಮಂಡ್ಯ, ಜು.25: ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಸೂಚನೆ ಅಗತ್ಯವಿಲ್ಲ. ನಮಗೆ ಯಾವಾಗ ಬೇಕೋ ಆವಾಗ ಅಧ್ಯಕ್ಷರು ಸಭೆ ಕರೆಯುತ್ತಾರೆ. ನಾವು ತಿಂಗಳಿಗೊಮ್ಮೆ, ಎರಡು ತಿಂಗಳಿಗೊಮ್ಮೆ ಸಭೆ ಸೇರಬೇಕು ಅಂದುಕೊಂಡಿದ್ದೆವು. ಅದೇ ರೀತಿ ಈ ತಿಂಗಳಲ್ಲಿ ಸಭೆ ಕರೆಯಬಹುದು  ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುತ್ತಿರುವ 22ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋಳಿವಾಡ, ರಾಜಣ್ಣ ಅವರಿಗೆ ಪಕ್ಷದ ಅಧ್ಯಕ್ಷರು ನೊಟೀಸ್ ಕೊಟ್ಟಿದ್ದಾರೆ. ಮೂವರು ಕಾಂಗ್ರೆಸ್ ನಾಯಕರ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಗೆ ಅವರನ್ನು ತೆಗೆದುಕೊಂಡಿದ್ದಾರೆ. ಅಷ್ಟಕ್ಕೆ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ ಎನ್ನುವುದು ಸರಿಯಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ಮಂಡ್ಯದ ಪೊಲೀಸ್ ಠಾಣೆಯಲ್ಲಿ ಬೆಳತೂರು ಗ್ರಾಮದ ಸ್ವಾಮಿ ಸಾವಿವನ ಬಗ್ಗೆ ಇಲಾಖೆ ತನಿಖೆ ನಡೆಸುತ್ತಿದ್ದು, ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು. ಔರಾದ್ಕರ್ ವರದಿ ಜಾರಿಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

ರಾಜ್ಯಮಟ್ಟದ ವಿಜ್ಞಾನ ಮೇಳ ಉದ್ಘಾಟನೆ:
ಇದಕ್ಕೂ ಪರಮೇಶ್ವರ್ ಅವರು, ಶ್ರೀಕ್ಷೇತ್ರದಲ್ಲಿ 22ನೇ ರಾಜ್ಯಮಟ್ಟದ ಚುಂಚಾದ್ರಿ ಕಲೋತ್ಸವದ ಅಂಗವಾಗಿ ಆಯೋಜಿಸಿದ್ದ ಎಸೆಸೆಲ್ಸಿ ಪರೀಕ್ಷೆಯಲ್ಲಿ 'ಎ' ಪ್ಲಸ್ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯಮಟ್ಟದ ವಿಜ್ಞಾನ ಮೇಳ ಉದ್ಘಾಟಸಿ ಮಾತನಾಡಿದರು.

ಆದಿಚುಂಚನಗಿರಿ ಮಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಿತ್ರನಟ ರಮೇಶ್ ಅರವಿಂದ್, ಶಾಸಕರಾದ ಕೆ.ಸುರೇಶ್‍ಗೌಡ, ಮರಿತಿಬ್ಬೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಸೂರ್ಯಪ್ರಕಾಶ್‍ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸ್ವಾಮಿ. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರೋಷೋತ್ತಮಾನಂದನಾಥ ಸ್ವಾಮೀಜಿ, ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಾಖಾ ಮಠದ ಸ್ವಾಮೀಜಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News