ಅಶ್ವಿನಿ ಪೊನ್ನಪ್ಪಗೆ 33 ಲಕ್ಷ ರೂ. ಚೆಕ್ ವಿತರಿಸಿದ ಡಿಸಿಎಂ ಪರಮೇಶ್ವರ್

Update: 2018-07-26 11:38 GMT

ಬೆಂಗಳೂರು,ಜು.26: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 21ನೇ ಕಾಮನ್‌ವೆಲ್ತ್ ಗೇಮ್ಸ್‌ನ ಬ್ಯಾಡ್ಮಿಂಟನ್ ಕ್ರೀಡೆಯ ಮಿಶ್ರ ಟೀಂ ವಿಭಾಗದಲ್ಲಿ ಚಿನ್ನ ಹಾಗೂ ಮಹಿಳಾ ಡಬಲ್ಸ್‌ನಲ್ಲಿ ಕಂಚು ಗೆದ್ದಿದ್ದ ಅಶ್ವಿನಿ ಪೊನ್ನಪ್ಪ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಅವರು 33 ಲಕ್ಷ ರೂ. ಚೆಕ್ ವಿತರಣೆ ಮಾಡಿದರು. 

ವಿಧಾನಸೌಧ ಕಚೇರಿಯಲ್ಲಿ ಅಶ್ವಿನಿ‌ ಪೊನ್ನಪ್ಪ ಅವರನ್ನು ಸನ್ಮಾನಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತ‌ನಾಡಿದ ಅವರು, ಕಾಮನ್‌ವೆಲ್ತ್ ಗೇಮ್‌ನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಅಶ್ವಿನಿ‌ ಪೊನ್ನಪ್ಪ ಅವರಿಗೆ 25 ಲಕ್ಷ ಹಾಗೂ ಕಂಚಿಗೆ 8 ಲಕ್ಷ ರೂ. ಪುರಸ್ಕಾರ ನೀಡಲಾಗಿದೆ. ನಮ್ಮ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತಂದಿರುವ ಅಶ್ವಿನಿ‌ ಪೊನ್ನಪ್ಪ ಅವರಿಗೆ ಅಭಿನಂದನೆಗಳು. ಒಲಿಂಪಿಕ್ಸ್‌ಗಾಗಿ ತಯಾರಿ ನಡೆಸುತ್ತಿರುವ ಇವರು, ಚಿನ್ನ‌ ಗೆಲ್ಲುವ‌ ಮೂಲಕ ರಾಜ್ಯಕ್ಕೆ ಕೀರ್ತಿ ತರಲಿ‌ ಎಂದು ಆಶಿಸಿದರು. ಅಲ್ಲದೇ, ಒಲಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ 5 ಕೋಟಿ, ಬೆಳ್ಳಿಗೆ 3 ಕೋಟಿ ಹಾಗೂ ಕಂಚು ಗೆದ್ದರೆ 2 ಕೋಟಿ‌ ರೂ. ನೀಡುವುದಾಗಿ ಸರಕಾರ ಘೋಷಿಸಿದೆ ಎಂದರು. 

ಕ್ರೀಡಾಪಟುಗಳಿಗೆ ಪೊಲೀಸ್‌ ಇಲಾಖೆಯಲ್ಲಿ‌ ನೇರ ನೇಮಕಾತಿ ಮಾಡಿಕೊಳ್ಳುವ‌ ಸಂಬಂಧ ಸಿಆ್ಯಂಡ್‌ಆರ್ ನಿಯಮದಲ್ಲಿ‌ ಬದಲಾವಣೆ ತಂದು‌ ಹಿಂದಿನ‌ ಪದ್ಧತಿ‌ ಮುಂದುವರೆಸುವುದಾಗಿ ಪರಮೇಶ್ವರ್ ಹೇಳಿದರು. ಈ ಮೊದಲು ಕ್ರೀಡಾಪಟುಗಳನ್ನು‌ ನೇರ ನೇಮಕಾತಿ‌ ಮಾಡಿಕೊಳ್ಳಲಾಗುತ್ತಿತ್ತು. ಈಗ ಈ ನೇರ ನೇಮಕಾತಿ ಇಲ್ಲ. ಹೀಗಾಗಿ ನಿಯಮಕ್ಕೆ ಬದಲಾವಣೆ ತಂದು‌ ನೇರ ನೇಮಕಾತಿಗೆ ಅವಕಾಶ ನೀಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News