ಅಬ್ದುಲ್ ಕಲಾಂ ಜಗತ್ತಿನ ಶ್ರೇಷ್ಟ ವಿಜ್ಞಾನಿ: ಶಾಸಕ ಪ್ರೀತಮ್ ಗೌಡ

Update: 2018-07-26 11:44 GMT

ಹಾಸನ,ಜು.26: ರಾಷ್ಟ್ರಪತಿಯಾಗಿ ಸಂಶೋಧನೆ ಮಾಡಿದ ಜಗತ್ತಿನ ಶ್ರೇಷ್ಟ ವಿಜ್ಞಾನಿ ಅಬ್ದುಲ್ ಕಲಾಂ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.

ನಗರದ ಸಾಲಗಾಮೆ ರಸ್ತೆಯಲ್ಲಿರುವ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಸಭಾಂಗಣದಲ್ಲಿ ಮಾನವ ಹಕ್ಕುಗಳ ವೇದಿಕೆಯಿಂದ ಗುರುವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರ 3ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸುವುದರ ಮೂಲಕ ಚಾಲನೆ ನೀಡಿ ನಂತರ ಮಾತನಾಡಿದ ಅವರು, ಕಲಾಂ ಅವರು ಮಕ್ಕಳಿಗೆ ಹೆಚ್ಚು ಪ್ರೇರಣೆಯಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದಂತಹ ಅಬ್ದುಲ್ ಕಲಾಂ ಅವರು ಪರಮಾಣು ಶಕ್ತಿಯಲ್ಲಿ ಸಂಶೋಧನೆ ನಡೆಸಿ ಯಶಸ್ವಿಯಾಗಿ ಜಗತ್ತಿಗೆ ಮಾದರಿಯಾದರು. ರಾಜಕೀಯವನ್ನು ಮೀರಿದ ಕೆಲವೇ ಕೆಲ ವ್ಯಕ್ತಿಗಳಲ್ಲಿ ಅಬ್ದುಲ್ ಕಲಾಂ ಕೂಡ ಒಬ್ಬರು. ಸಾಮಾರಸ್ಯಕ್ಕೆ ಮತ್ತು ಸೌಹಾರ್ದತೆಗೆ ಪ್ರೇರಣೆ ಆಗಿದ್ದು, ಇವರ ನಡವಳಿಕೆಗಳು ಇಂದಿನ ಯುವ ಪೀಳಿಗೆಗೆ ಅವಶ್ಯಕವಾಗಿದೆ. ಅವರ ಸಲಹೆಯನ್ನು ಮೈಗೂಡಿಸಿಕೊಂಡು ಮುಂದೆ ನಡೆದರೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಕರೆ ನೀಡಿದರು.

ನವಕರ್ನಾಟಕ ಯುವಶಕ್ತಿ ರಾಜ್ಯಾಧ್ಯಕ್ಷ ಕೆ.ಎನ್. ಲಿಂಗೇಗೌಡ ಮಾತನಾಡಿ, ಯಾರು ಇತಿಹಾಸ ಓದಿರುವುದಿಲ್ಲವೋ, ಅವರು ಇತಿಹಾಸ ಸೃಷ್ಟಿಸಲಾರರು. ಹಿಂದಿನ ದಿನಗಳಲ್ಲಿ ಹಿರಿಯರ ತ್ಯಾಗ, ಬಲಿದಾನವನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯ. ಕಡು ಬಡತನದಲ್ಲಿ ಬೆಳೆದು ಬಂದ ಅಬ್ದುಲ್ ಕಲಾಂ ರಾಷ್ಟ್ರಪತಿಯಾದರು. ಅವರ ಆದರ್ಶ ನಮಗೆಲ್ಲಾ ದಾರಿ ದೀಪವಾಗಿದೆ ಎಂದರು. 

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಮಾತನಾಡಿ, 1947ರ ಸ್ವಾತಂತ್ರ್ಯದ ನಂತರ ನಮಗೆ ನೋವಾಗಿದೆ. ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕು. ಇದಕ್ಕಾಗಿ ಯುವ ಸಮುದಾಯ ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಹಿರಿಯ ವಾರ್ತಾಧಿಕಾರಿ ವಿನೋದ್‍ಚಂದ್ರ, ಮಾನವ ಹಕ್ಕುಗಳ ವೇದಿಕೆಯ ಜಿಲ್ಲಾಧ್ಯಕ್ಷ ಸಯ್ಯದ್ ಇಜಾಜ್, ನಿರ್ದೇಶಕ ಕೆ.ಸಿ. ಮಂಜುನಾಥ್, ಸಿ.ಎಸ್. ಮಹಾಂತಪ್ಪ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News