ಗೌರಿ ಲಂಕೇಶ್ ಹತ್ಯೆ ಪ್ರಕರಣ: ಸುಳ್ಳು ಹೇಳಿ ಸಿಕ್ಕಿಬಿದ್ದ ಸುರೇಶ್

Update: 2018-07-26 14:47 GMT

ಬೆಂಗಳೂರು, ಜು.26: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಟ್(ಎಸ್‌ಐಟಿ) ತನಿಖಾಧಿಕಾರಿಗಳಿಗೆ ಸುಳ್ಳು ಹೇಳಿಕೆ ನೀಡಿ ಎಚ್.ಎಲ್.ಸುರೇಶ್ ಎಂಬಾತ ಸಿಕ್ಕಿಬಿದ್ದಿದ್ದಾನೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹೆರೂರು ನಿವಾಸಿ ಸುರೇಶ್(36) ಗೌರಿಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಮಹಾರಾಷ್ಟ್ರದ ಪುಣೆ ನಿವಾಸಿ ಅಮೋಲ್ ಕಾಳೆ, ಪರಶುರಾಮ್  ವಾಗ್ಮೋರೆ ಹಾಗೂ ಪ್ರವೀಣ್ ಕುಮಾರ್‌ಗೆ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ಮನೆ ಬಾಡಿಗೆ ಕೊಟ್ಟಿದ್ದ.
ಆದರೆ, ತನಿಖಾಧಿಕಾರಿಗಳು, ಆರೋಪಿಗಳನ್ನು ವಶಕ್ಕೆ ಪಡೆದು ಮನೆ ಮಾಲಕ ಸುರೇಶ್‌ನನ್ನು ವಿಚಾರಣೆಗೊಳಪಡಿಸಿದಾಗ, ‘ಜಾಹೀರಾತು ನೋಡಿ ಬಂದವರಿಗೆ ಮನೆ ಬಾಡಿಗೆ ಕೊಟ್ಟಿದ್ದೇ ವಿನಃ, ಬೇರೆ ಮಾಹಿತಿ ಇಲ್ಲ ಎಂದಿದ್ದ’. ಬಳಿಕ ತನಿಖೆ ಚುರುಕುಗೊಂಡಾಗ, ಸ್ವತಃ, ಸುರೇಶನೇ, ಆರೋಪಿಗಳನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಎನ್ನುವ ಆತಂಕದ ಮಾಹಿತಿ ಹೊರ ಬಂದಿದೆ.

ನಗರದ ರಾಜರಾಜೇಶ್ವರಿ ನಗರದಲ್ಲಿ ಗೌರಿ ಲಂಕೇಶ್ ಹತ್ಯೆಗೈಯ್ಯುವ ಮುನ್ನ ಇವರೆಲ್ಲರಿಗೂ ಸುರೇಶ್ ಆಶ್ರಯ ಒದಗಿಸಿದ್ದ ಎಂದು ತಿಳಿದು ಬಂದಿದೆ. ಆರೋಪಿ ಪರಶುರಾಮ್ ವಾಘ್ಮೋರೆ ವಿಚಾರಣೆ ವೇಳೆ ಸುರೇಶ್ ಬಗ್ಗೆ ಬಾಯಿಬಿಟ್ಟಿದ್ದ. ವಾಗ್ಮೋರೆ ಕೊಟ್ಟ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಸಿಟ್ ತನಿಖಾಧಿಕಾರಿಗಳು ತುಮಕೂರಿನಲ್ಲಿ ಸುರೇಶ್‌ನನ್ನು ಬುಧವಾರ ಬಂಧಿಸಿದ್ದಾರೆ.

11ನೇ ಆರೋಪಿ: ಸುರೇಶ್ ಬಂಧನದಿಂದ ಗೌರಿ ಲಂಕೇಶ್ ಪ್ರಕರಣದಲ್ಲಿ ಸಿಟ್ ವಶಕ್ಕೆ ಪಡೆದಿರುವ ಆರೋಪಿಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ಮದ್ದೂರಿನ ನವೀನ್‌ಕುಮಾರ್, ಮೋಹನ್ ನಾಯಕ್, ರಾಜೇಶ್ ಬಂಗೇರಾ ಸೇರಿದಂತೆ ಈವರೆಗೂ 10 ಆರೋಪಿಗಳನ್ನು ಬಂಧಿಸಲಾಗಿದೆ.

ನ್ಯಾಯಾಂಗ ಬಂಧನ
ಸುರೇಶ್‌ನನ್ನು ವಶಕ್ಕೆ ಪಡೆದ ಸಿಟ್ ತನಿಖಾಧಿಕಾರಿಗಳು ಗುರುವಾರ ಬೆಂಗಳೂರಿನ ಮೂರನೆ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

ತಾಯಿ ಧರ್ಮ ಪ್ರಚಾರಕಿ?
ಬಂಧಿತ ಆರೋಪಿ ಸುರೇಶ್ ಕುಣಿಗಲ್ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಎನ್ನಲಾಗಿದ್ದು, ಆತನ ತಾಯಿ ಭಾಗಮ್ಯ ಎಂಬಾಕೆ ಸನಾತನ ಧರ್ಮ ಪ್ರಚಾರಕಿ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News