ಚಿಕ್ಕಮಗಳೂರು: ಭದ್ರಾ ನದಿಗೆ ಬಿದ್ದು ಮಂಗಳೂರು ಮೂಲದ ಯುವಕ ನೀರುಪಾಲು

Update: 2018-07-26 13:56 GMT

ಚಿಕ್ಕಮಗಳೂರು, ಜು.26: ಪ್ರವಾಸಕ್ಕೆಂದು ಮಂಗಳೂರಿನಿಂದ ಬಂದಿದ್ದ ಯುವಕರ ಗುಂಪಿನ ಸದಸ್ಯನೊಬ್ಬ ಪಟ್ಟಣ ಸಮೀಪದಲ್ಲಿ ಹರಿಯುವ ಭದ್ರಾ ನದಿಯ ಅಂಬಾತೀರ್ಥ ಎಂಬಲ್ಲಿ ಕಾಲು ಜಾರಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೀರಿನಲ್ಲಿ ಕೊಚ್ಚಿ ಹೋದ ಯುವಕನನ್ನು ಮಂಗಳೂರಿನ ತುಂಬೆ ಗ್ರಾಮದ ನಿವಾಸಿ ಕಿರಣ್ ಕೋಟ್ಯಾನ್(26) ಎಂದು ಗುರುತಿಸಲಾಗಿದ್ದು, ಈತ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಕಿರಣ್ ಕುಮಾರ್ ಮಂಗಳೂರಿನ ತನ್ನ 12 ಮಂದಿ ಸ್ನೇಹಿತರೊಂದಿಗೆ ಗುರುವಾರ ಕಳಸ ಹೋಬಳಿ ವ್ಯಾಪ್ತಿಯ ಕುದುರೆಮುಖಕ್ಕೆ ಪ್ರವಾಸಕ್ಕೆ ಬಂದಿದ್ದ ಎನ್ನಲಾಗಿದೆ. ಗುರುವಾರ ಈ ಯುವಕರು ಕುದುರೆಮುಖ ಪ್ರವಾಸ ಮುಗಿಸಿ ಸಂಸೆ ಮೂಲಕ ಕಳಸಕ್ಕೆ ಬಂದ್ದಿದ್ದರು ಎಂದು ತಿಳಿದು ಬಂದಿದ್ದು, ನಂತರ ಕಳಸ ಪಟ್ಟಣದ ಹೊರನಾಡು ರಸ್ತೆಯಲ್ಲಿರುವ ಅಂಬಾತೀರ್ಥ ಪ್ರವಾಸಿ ತಾಣದ ಬಗ್ಗೆ ಮಾಹಿತಿ ಪಡೆದುಕೊಂಡ ಯುವಕರು ಅಲ್ಲಿಗೆ ಪ್ರಯಾಣ ಬೆಳಸಿದ್ದರೆನ್ನಲಾಗಿದೆ.

ಅಂಬಾತೀರ್ಥಕ್ಕೆ ಕಾರಿನಲ್ಲಿ ಹೋಗಿದ್ದ ಯುವಕರ ಪೈಕಿ ಕೆಲವರು ಧುಮ್ಮಿಕ್ಕಿ ಹರಿಯುತ್ತಿದ್ದ ನದಿ ಕಂಡು ಭಯಭೀತರಾಗಿ ದೂರದಲ್ಲಿ ನಿಂತು ಫೋಟೊ, ಸೆಲ್ಫಿ ಪಡೆದುಕೊಂಡರೆ ಮತ್ತೆ ಕೆಲವರು ನದಿಯ ಹತ್ತಿರದ ಬಂಡೆ ಕಲ್ಲುಗಳನ್ನು ಏರಲು ಹುಚ್ಚು ಸಾಹಸ ಮಾಡಲು ಮುಂದಾಗಿದ್ದರೆನ್ನಲಾಗಿದ್ದು, ಈ ಪೈಕಿ ಕಿರಣ್ ಕೋಟ್ಯಾನ್ ಎಂಬಾತ ನದಿಗೆ ಹೊಂದಿಕೊಂಡಿದ್ದ ಬಂಡೆಕಲ್ಲನ್ನೇರಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ನದಿಗೆ ಬಿದ್ದ ತಕ್ಷಣ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆಂದು ಆತನ ಜತೆಯಲ್ಲಿದ್ದ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಸುದ್ದಿ ತಿಳಿದ ತಕ್ಷಣ ಅಂಬಾತೀರ್ಥದ ಪಕ್ಕದ ತೋಟಗಳಲ್ಲಿದ್ದವರು ಕಿರಣ್‍ ಕುಮಾರ್ ರಕ್ಷಣೆ ಮುಂದಾಗಿದ್ದಾರಾದರೂ ಅಷ್ಟರಲ್ಲಾಗಲೇ ಕಿರಣ್ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ. ನಂತರ ಸುದ್ಧಿ ತಿಳಿದ ಪಟ್ಟಣದ ನಾಗರಿಕರು, ಪೊಲೀಸರು ಯುವಕನಿಗಾಗಿ ಶೋಧ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮುಳುಗು ತಜ್ಞರು ನದಿಯಲ್ಲಿ ಶೋಧ ಮುಂದುವರಿಸಿದರೂ ಪ್ರಯೋಜನವಾಗಿಲ್ಲ. ಭದ್ರಾನದಿಯಲ್ಲಿ ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳಿಯರು ಹಾಗೂ ಪೊಲೀಸರು ಸಮೀಪದ ಹೆಬ್ಬಾಳೆ, ವಶಿಷ್ಠ ತೀರ್ಥ ಸೇರಿದಂತೆ ಭದ್ರಾ ನದಿಯ ಅಂಚಿನುದ್ದಕ್ಕೂ ಹುಡುಕಾಟ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಸೆಲ್ಫಿ ಹುಚ್ಚಿಗೆ ಬಲಿಯಾಯಿತೇ ಜೀವ ?
ಕಳೆದ ಕೆಲ ತಿಂಗಳಿನಿಂದ ಇಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಭದ್ರಾ ನದಿಯ ಬಂಡೆ ಕಲ್ಲುಗಳು ಪಾಚಿ ಕಟ್ಟಿ ಹೋಗಿದ್ದವು. ತುಂಬಿ ಹರಿಯುವ ನೀರಿನ ಮಧ್ಯೆ ಕಾಣಿಸಿಕೊಳ್ಳುತ್ತಿದ್ದ ಅಪಾಯಕಾರಿ ಬಂಡೆಗಳ ಮೇಲೆ ಯುವಕ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆಂದು ತಿಳಿದು ಬಂದಿದೆ.

ಮಳೆಗಾಲದಲ್ಲಿ ಅಂಬಾತೀರ್ಥ ಪ್ರವಾಸ ಸೂಕ್ತವಲ್ಲ: ಕಳಸ ಪಟ್ಟಣ ಸಮೀಪದ ಅಂಬಾತೀರ್ಥ ಬಂಡಕಲ್ಲುಗಳಿಂದ ಕೂಡಿದ ಕಣ್ಮನ ಸೆಳೆಯುವ ಪ್ರವಾಸಿ ತಾಣ. ಶಿಲ್ಪಿಗಲೇ ಕೆತ್ತಿದಂತಿರುವ ಇಲ್ಲಿನ ಅತ್ಯಾಕರ್ಷಕ ಬಂಡೆ ಕಲ್ಲುಗಳು ಎಂತವರನ್ನೂ ಆಕರ್ಷಿಸುತ್ತವೆ. ಈ ಕಾರಣಕ್ಕೆ ಈ ಸ್ಥಳದಲ್ಲಿ ಸಾಕಷ್ಟು ಸಿನೆಮಾ ಚಿತ್ರೀಕರಣ ಪ್ರತೀ ವರ್ಷ ನಡೆಯುತ್ತದೆ. ಆದರೆ ಇಲ್ಲಿಗೆ ಹೋಗುವ ಧೈರ್ಯವನ್ನು ಮಳೆಗಾಲದಲ್ಲಿ ಸ್ಥಳೀಯರು ಯಾರೂ ಮಾಡುವುದಿಲ್ಲ.  ಈ ಬಗ್ಗೆ ಅರಿವಿರುವವರು ಬೇಸಿಗೆಯಲ್ಲಿ ಭದ್ರಾ ನದಿಯಲ್ಲಿ ನೀರು ಕಡಿಮೆ ಹರಿಯುವುದರಿಂದ ಇಲ್ಲಿಗೆ ಭೇಟಿ ನೀಡುತ್ತಾರೆ. ಮಂಗಳೂರಿನಿಂದ ಬಂದು ನದಿ ಪಾಲಾಗಿರುವ ಯುವಕ ಸೇರಿದಂತೆ ಉಳಿದವರಿಗೆ ಅಂಬಾತೀರ್ಥದ ಅಪಾಯದ ಬಗ್ಗೆ ಮನ್ಸೂಚನೆ ಇರದ ಕಾರಣ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಅಂಬಾತೀರ್ಥಕ್ಕೆ ಹೋಗುವ ದಾರಿ ಮಧ್ಯೆ ಗಣಪತಿ ಕಟ್ಟೆ ಎಂಬಲ್ಲಿರುವ ಕೆಲ ಅಂಗಡಿ ಮುಂಗಟ್ಟುಗಳ ಮಾಲಕರು ಈ ಬಗ್ಗೆ ಜಾಗೃತಿಗಾಗಿ ನಾಮ ಫಲಕ ಹಾಕಿದ್ದರೆ ಈ ಯುವಕರು ಇಲ್ಲಿಗೆ ಹೋಗುವ ಸಾಹಸ ಮಾಡುತ್ತಿರಲಿಲ್ಲ ಎಂಬುದು ಕಳಸ ಪಟ್ಟಣದ ನಾಗರಿಕರ ಅಭಿಪ್ರಾಯವಾಗಿದ್ದು, ಮಳೆಗಾಲದಲ್ಲಿ ಅಂಬಾತೀರ್ಥಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇದಿಸಬೇಕೆಂದು ನಾಗರಿಕರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News