ಕೊಪ್ಪ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಪ್ರೀತಂ ಶವ ಪತ್ತೆ

Update: 2018-07-26 14:36 GMT

ಕೊಪ್ಪ,ಜು.26: ಸೋಮವಾರ ಶಾಲೆಯಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದ ಹರಿಹರಪುರ ಪ್ರೌಢಶಾಲಾ ಹತ್ತನೇ ತರಗತಿ ವಿದ್ಯಾರ್ಥಿ ಭಂಡಿಗಡಿ ಅರೇಕಲ್ ನಿವಾಸಿ ಎ.ಎಲ್.ಪ್ರೀತಂ(15) ಶವ ಗುರುವಾರ ಬೆಳಿಗ್ಗೆ ಅಂಬಳಿಕೆ ಹಳ್ಳದಲ್ಲಿ ಪತ್ತೆಯಾಗಿದೆ. ಆದರೆ ನಾಗಲಾರಪುರ ತುಂಗಾನದಿ ಸೇತುವೆ ಬಳಿ ಸ್ಕೂಟಿ ಇಟ್ಟು ನಾಪತ್ತೆಯಾಗಿದ್ದ ಕಿರಣ್ ಕುಮಾರ್ ಕುರಿತು ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.

ಬೆಳಿಗ್ಗೆ 8:30 ರ ಹೊತ್ತಿಗೆ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಅಂಬಳಿಕೆ ಹಳ್ಳದಲ್ಲಿ ಮರವೊಂದರ ಮುರಿದ ಕೊಂಬೆಯಡಿ ಶವ ಕಾಣಿಸಿಕೊಂಡಿದ್ದು, ಕೂಡಲೇ ಹರಿಹರಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪಿಎಸ್‍ಐ ಸೋಮಶೇಖರ್ ನೇತೃತ್ವದ ಪೊಲೀಸ್ ತಂಡ ಹಾಗೂ ಕುಟುಂಬ ಸದಸ್ಯರು ಶವದ ಮೇಲಿದ್ದ ಬಟ್ಟೆಯ ಆಧಾರದಲ್ಲಿ ಮೃತದೇಹವನ್ನು ಪ್ರೀತಂ ಶವವೆಂದು ಗುರುತಿಸಿದ್ದಾರೆ.

ಹಳ್ಳದ ಪಕ್ಕದಲ್ಲಿ ಶಾಲಾ ಬ್ಯಾಗ್ ಮತ್ತು ಚಪ್ಪಲಿ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ, ಮಂಗಳವಾರ ಮತ್ತು ಬುಧವಾರ ಇಡೀ ದಿನ ಅಂಬಳಿಕೆ ಹಳ್ಳ ಹಾಗೂ ತುಂಗಾ ನದಿಯಲ್ಲಿ ಪ್ರೀತಂಗಾಗಿ ಹುಡುಕಾಟ ನಡೆಸಲಾಗಿತ್ತು. ಬಾಳೆಹೊಳೆಯ ಮುಳುಗುತಜ್ಞ ಭಾಸ್ಕರ್, ನರಸಿಂಹರಾಜಪುರದ ರಮೇಶ್ ಮತ್ತು ತಂಡದವರು 2 ಉಕ್ಕಡದ ಮೂಲಕ ಶೋಧಕಾರ್ಯ ನಡೆಸಲಾಗಿತ್ತು. ಹರಿಹರಪುರ ಪೊಲೀಸ್, ಗೃಹರಕ್ಷದಳ, ಕೊಪ್ಪ ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಸಹಕಾರ ನೀಡಿದ್ದರು. 

ಗುರುವಾರ ಹರಿಹರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಕುಟುಂಬದವರಿಗೆ ಬಿಟ್ಟುಕೊಡಲಾಯಿತು. ಮಧ್ಯಾಹ್ನ ಭಂಡಿಗಡಿಯ ಅರೆಕಲ್‍ನಲ್ಲಿರುವ ಹಿಂದೂರುದ್ರಭೂಮಿಯಲ್ಲಿ ಮೃತ ಪ್ರೀತಂನ ಶವ ಸಂಸ್ಕಾರ ನಡೆಸಲಾಯಿತು. ಮೃತನ ಗೌರವಾರ್ಥ ಗುರುವಾರ ಪ್ರೀತಂ ವ್ಯಾಸಂಗ ಮಾಡುತ್ತಿದ್ದ ಹರಿಹರಪುರದ ಸಚ್ಚಿದಾನಂದ ಸರಸ್ವತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ರಜೆ ಘೋಷಿಸಲಾಗಿತ್ತು.

ಕೊಪ್ಪ ಕಾಚಗಲ್‍ನ ನಾರಾಯಣ ಪೂಜಾರಿ ಎಂಬವರ ಮಗ ಕಿರಣ್‍ಕುಮಾರ್(22) ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದು, 'ತಾನು ಸ್ಕೂಟಿಯಲ್ಲಿ ಹೋಗುತ್ತಿದ್ದು ನಾಗಲಾರಪುರ ತುಂಗಾನದಿ ಸೇತುವೆ ಬಳಿ ಸ್ಕೂಟಿ ನಿಲ್ಲಿಸಿರುತ್ತೇನೆ. ವಾಪಸ್ಸು ತಗೊಂಡು ಬನ್ನಿ, ತನ್ನನ್ನು ಹುಡುಕಬೇಡಿ. ವಾಪಸ್ಸು ಬರುವುದಿಲ್ಲ' ಎಂದು ಮನೆಯಲ್ಲಿ ಚೀಟಿ ಬರೆದಿಟ್ಟಿದ್ದ. ಮದ್ಯಾಹ್ನದ ಹೊತ್ತಿಗೆ ಚೀಟಿಯನ್ನು ಗಮನಿಸಿದ ಮನೆಮಂದಿ ಕೂಡಲೇ ತುಂಗಾನದಿ ಸೇತುವೆ ಬಳಿ ಬಂದು ನೋಡಿದಾಗ ಸ್ಕೂಟಿ ಕಂಡು ಬಂದಿದೆ. ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಿರಣ್‍ಕುಮಾರ್ ಜೀವನದಲ್ಲಿ ಜಿಗುಪ್ಸೆಗೊಂಡು ನದಿಗೆ ಹಾರಿರಬಹುದು ಎಂಬ ಅನುಮಾನದ ಮೇಲೆ ಸೋಮವಾರದಿದಂದಲೂ ಹುಡುಕಾಟ ನಡೆದಿದೆ. ತುಂಗಾನದಿಯಲ್ಲಿ ಐದಾರು ಕಿ.ಮೀ. ವರೆಗೆ ಉಕ್ಕಡ ಬಳಸಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಗುರುವಾರ ಸಂಜೆವರೆಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಶೋಧಕಾರ್ಯವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News