ಗೃಹ ಸಚಿವನಾಗಿದ್ದರೆ ಗುಂಡು ಹಾರಿಸಲು ಹೇಳುತ್ತಿದ್ದೆ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2018-07-26 15:04 GMT

ಬೆಂಗಳೂರು/ವಿಜಯಪುರ, ಜು. 26: ದೇಶದಲ್ಲಿ ಜಾತ್ಯತೀತ ಸೋಗಿನಲ್ಲಿರುವ ದೇಶದ್ರೋಹಿ ಬುದ್ಧಿಜೀವಿಗಳಿಂದಲೇ ದೇಶ ದುರ್ಬಲವಾಗುತ್ತಿದೆ, ನಾನೇನಾದರೂ ಗೃಹ ಸಚಿವನಾಗಿದ್ದರೆ ಇವರೆಲ್ಲರಿಗೂ ಸಾಮೂಹಿಕವಾಗಿ ಗುಂಡು ಹಾರಿಸುವಂತೆ ಹೇಳುತ್ತಿದ್ದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಗುರುವಾರ ವಿಜಯಪುರದಲ್ಲಿ ಏರ್ಪಡಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ನಾಡಿನ ಅನ್ನ, ನೀರು ಸೇವಿಸಿ ದೇಶದ ವಿರುದ್ಧವೇ ಪಿತೂರಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಾಶ್ಮೀರದಲ್ಲಿ ಭಾರತ ವಿರೋಧಿ ಘೋಷಣೆ ಕೂಗುವುದು ಹಾಗೂ ಸೈನಿಕರ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದು, ಇದನ್ನು ಖಂಡಿಸಬೇಕು ಎಂದು ಹೇಳಿದರು.

‘ಸೈನಿಕರಿಂದ ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ’ ಎಂದು ನಮ್ಮ ವಿಪಕ್ಷ ನಾಯಕರೇ ಗಂಭೀರ ಆರೋಪ ಮಾಡುತ್ತಾರೆ. ದೇಶದ್ರೋಹಿ ವಿರುದ್ಧ ಕೇಸು ದಾಖಲಿಸಿದರೆ ಬುದ್ಧಿಜೀವಿಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಕೂಗು ಹೆಚ್ಚುತ್ತದೆ. ಆದರೆ, ಕನಿಷ್ಠ ಉಷ್ಣಾಂಶದಲ್ಲಿ ದೇಶಕ್ಕೆ ಭದ್ರತೆ ಒದಗಿಸಿ, ದೇಶದ ರಕ್ಷಣೆ ಮಾಡುವ ಸೈನಿಕರಿಗೆ ಎಷ್ಟೇ ತೊಂದರೆಯಾದರೂ ಯಾರೊಬ್ಬರೂ ಮಾನವ ಹಕ್ಕುಗಳ ಪ್ರಸ್ತಾಪ ಮಾಡಲ್ಲ ಎಂದು ವಾಗ್ದಾಳಿ ನಡೆಸಿದರು.

ಇಸ್ರೇಲ್ ಮಾದರಿಯಲ್ಲೆ ಪ್ರತಿಯೊಬ್ಬರು ಕೆಲಕಾಲ ಕಡ್ಡಾಯವಾಗಿ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕೆಂಬ ನಿಯಮವನ್ನು ನಮ್ಮಲ್ಲೂ ಜಾರಿಗೆ ತರಬೇಕು ಎಂದು ಆಗ್ರಹಿಸಿದ ಅವರು, ಇದರಿಂದ ರಾಜಕಾರಣಿಗಳು ಲೂಟಿ ಹೊಡೆಯುವುದು ತಪ್ಪಲಿದೆ ಎಂದು ಹೇಳಿದರು.

ದೇಶದ ಎಲ್ಲೆಡೆ ಪ್ರತಿನಿತ್ಯ ಸೈನಿಕರ ತ್ಯಾಗ, ಬಲಿದಾನದ ಸ್ಮರಣೆ ನಡೆಯುತ್ತಿದೆ. ಆದರೆ, ಹಿಂದಿನ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರನಾಗಿದ್ದ ದಿನೇಶ್ ಅಮಿನ್ ಮಟ್ಟು ಅವರು ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿದ್ದಾರೆ ಎಂದು ಯತ್ನಾಳ್ ಇದೇ ವೇಳೆ ಟೀಕಿಸಿದರು.

ಪಾಕಿಸ್ತಾನ, ಚೀನಾ ಭಾರತದ ಪ್ರಮುಖ ಶತ್ರು ರಾಷ್ಟ್ರಗಳು. ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿಯನ್ನು ಇನ್ನೂ ಬಿಟ್ಟಿಲ್ಲ. ಸ್ನೇಹದ ಹಸ್ತ ಚಾಚಿದ ಹಿಂದಿನ ಪ್ರಧಾನಿ ವಾಜಪೇಯಿ ಅಂತಹ ಮುತ್ಸದ್ದಿಗೆ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿತು ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News