×
Ad

ಸಕಲೇಶಪುರ ಪಟ್ಟಣದ ಕಟ್ಟಡಗಳ ತೆರವಿಗೆ ಮುಂದಾಗದಂತೆ ಹೈಕೋರ್ಟ್ ಮಧ್ಯಂತರ ಆದೇಶ

Update: 2018-07-26 21:49 IST

ಬೆಂಗಳೂರು, ಜು.26: ಸಕಲೇಶಪುರ ಪಟ್ಟಣದ ಬಿ.ಎಂ. ರಸ್ತೆ ಅಗಲೀಕರಣಕ್ಕಾಗಿ ರಸ್ತೆಯ ಎರಡು ಬದಿಯಲ್ಲಿರುವ ಯಾವುದೇ ಕಟ್ಟಡಗಳ ತೆರವಿಗೆ ಮುಂದಾಗದಂತೆ ಸರಕಾರಕ್ಕೆ ಹೈಕೋರ್ಟ್ ಗುರುವಾರ ಮಧ್ಯಂತರ ಆದೇಶ ನೀಡಿದೆ.

ಕಟ್ಟಡ ತೆರವುಗೊಳಿಸಲು ಸಕಲೇಶಪುರ ಸಹಾಯಕ ಆಯುಕ್ತರ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಎಚ್.ಎಸ್. ಧರ್ಮರಾಜ್ ಸೇರಿ 10 ಮಂದಿ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಪೀಠ, ಅರ್ಜಿಯ ಮುಂದಿನ ಆದೇಶದವರೆಗೆ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಸದಂತೆ ಮಧ್ಯಂತರ ಆದೇಶ ನೀಡಿತು.

ಇದೇ ವೇಳೆ, ಅರ್ಜಿ ಸಂಬಂಧ ರಾಜ್ಯ ಸರಕಾರ, ಹಾಸನ ಜಿಲ್ಲಾಧಿಕಾರಿ, ಸಕಲೇಶಪುರ ಉಪ ವಿಭಾಗದ ಸಹಾಯಕ ಆಯುಕ್ತರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಸಕಲೇಶಪುರದ ಬಿ.ಎಂ. ರಸ್ತೆ ಅಗಲೀಕರಣಕ್ಕಾಗಿ ಕಟ್ಟಡಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದ ಸಹಾಯಕ ಆಯುಕ್ತರ ಕ್ರಮ ಪ್ರಶ್ನಿಸಿ, 28 ಮಂದಿ ಸ್ಥಳೀಯರು ಸಲ್ಲಿಸಿದ್ದ ಅರ್ಜಿಯನ್ನು ಜು.19ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಟ್ಟಡ ತೆರವು ಕಾರ್ಯಾಚರಣೆಗೆ ಮಧ್ಯಂತರ ತಡೆ ನೀಡಿತ್ತು.
ಆದರೆ, ಜು.22ರಂದು ಬೆಳಗ್ಗೆ 6 ಗಂಟೆಗೆ ಕಾರ್ಯಾಚರಣೆ ನಡೆಸಿದ್ದ ಸಹಾಯಕ ಆಯುಕ್ತರು, ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದ ಅರ್ಜಿದಾರರ ಕಟ್ಟಡಗಳನ್ನು ಹೊರತುಪಡಿಸಿ ಇತರೆ ಕಟ್ಟಡಗಳ ಕೆಲ ಭಾಗಗಳನ್ನು ತೆರವುಗೊಳಿಸಿದ್ದರು. ಇದನ್ನು ಪ್ರಶ್ನಿಸಿ 10 ಮಂದಿ ಸ್ಥಳೀಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರಕರಣವೇನು: ಸಕಲೇಶಪುರ ಪಟ್ಟಣದ ಮುಖ್ಯರಸ್ತೆಯನ್ನು 2 ಕಿ.ಮೀ ಉದ್ದದ ರಸ್ತೆ ಅಗಲೀಕರಣಕ್ಕೆ ಲೋಕೋಪಯೋಗಿ ಇಲಾಖೆ ನಿರ್ಧರಿಸಿದ್ದು, ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ನಿಯಮಗಳ ಪ್ರಕಾರ ಯಾವುದೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಸರಕಾರ ಅಧಿಸೂಚನೆ ಹೊರಡಿಸಬೇಕು. ಆದರೆ ಈ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯಾಗಲಿ, ಪರಿಹಾರ ಘೋಷಣೆಯಾಗಲಿ ಮಾಡಿಲ್ಲ. ಸಾರ್ವಜನಿಕರಿಂದ ಆಕ್ಷೇಪಣೆಗಳನ್ನೂ ಸ್ವೀಕರಿಸಿಲ್ಲ. ಏಕಾಏಕಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದು ಕಾನೂನು ಬಾಹಿರ ಕ್ರಮವಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News