"ಯಾಗಗಳು ಶಕ್ತಿಶಾಲಿಯೆಂದಾದರೆ ದೇಶದ ಗಡಿಭಾಗಗಳಲ್ಲಿ ಮಾಡಲಿ"

Update: 2018-07-26 16:33 GMT

ಮೈಸೂರು,ಜು.26: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಉಡುಪಿಯಲ್ಲಿ ಮಾಡಿದ ಶತ ಚಂಡಿಕಾ ಯಾಗದಿಂದ ಯಾವುದೇ ಪ್ರಯೋಜನವಿಲ್ಲ. ಹೋಮ, ಯಜ್ಞೆಗಳೆಲ್ಲ ಸುಳ್ಳೆಂದು 12ನೇ ಶತಮಾನದಲ್ಲಿಯೇ ಕ್ರಾಂತಿಯೋಗಿ ಬಸವಣ್ಣನವರು ಹೇಳಿದ್ದಾರೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್. ಭಗವಾನ್ ವಾಗ್ದಾಳಿ ನಡೆಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯಜ್ಞ, ಹೋಮ, ಯಾಗಗಳು ಶಕ್ತಿಶಾಲಿಯೆಂದಾದರೆ ಒಮ್ಮೆ ಪಾಕ್, ಚೀನಾ ಸೈನಿಕರಿಂದ ಕಿರುಕುಳ ಉಂಟಾಗುವ ನಮ್ಮ ದೇಶದ ಆ ಎರಡೂ ಗಡಿ ಭಾಗದಲ್ಲಿ ಮಾಡಲಿ. ಒಂದು ವೇಳೆ ಶತ್ರು ದೇಶದ ಸೈನಿಕರೆಲ್ಲ ಅದರಿಂದಾಗಿ ಓಡಿ ಹೋದಲ್ಲಿ ನಿಜಕ್ಕೂ ಯಜ್ಞ, ಯಾಗಗಳಲ್ಲಿ ಶಕ್ತಿಯಿದೆ ಎಂಬುದನ್ನು ತಾವು ಒಪ್ಪುವುದಾಗಿ ತಿಳಿಸಿದರು.

ಕೈಗೆ ದಾರ ಕಟ್ಟಿಕೊಂಡು ಓಡಾಡುವ ಪ್ರತಿಯೊಬ್ಬರೂ ಒಮ್ಮೆಯಾದರೂ ನಿಜಕ್ಕೂ ಆ ದಾರಕ್ಕೆ ಶಕ್ತಿ ಇದೆಯೋ ಇಲ್ಲವೋ ಎಂಬುದನ್ನು ಇದೇ ರೀತಿ ಗಡಿಯಲ್ಲಿ ಅದರ ಶಕ್ತಿ ಪ್ರದರ್ಶಿಸಿ, ಪರೀಕ್ಷಿಸಿಕೊಳ್ಳಲಿ ಎಂದರು. ಈಗಲೂ ದೇಶವನ್ನು ಪಂಚಾಂಗವೇ ಆಳುತ್ತಿದ್ದು, ಅದರ ಬದಲು ಜನರು ಸಮಾನತೆ ಸಾರುವ, ಮೌಢ್ಯ ನಿರಾಕರಿಸುವ ಸಂವಿಧಾನ ಪಾಲಿಸಲಿ ಎಂದ ಅವರು, ಇಂತಹ ರಾಜಕಾರಣಿಗಳಿಂದಲೇ ಜನ ಮೌಢ್ಯ, ಕಂದಾಚಾರದಿಂದ ಹೊರಬರಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಮೈತ್ರಿ ಸರಕಾರದ ಸಚಿವರಾದ ಜಿ.ಟಿ. ದೇವೇಗೌಡ ಹಾಗೂ ಎನ್. ಮಹೇಶ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.

ಆರಂಭದಲ್ಲಿ ಜಿ.ಟಿ. ದೇವೇಗೌಡರು ತಮಗೆ ದೊರೆತ ಖಾತೆ ನಿಭಾಯಿಸಲು ತಮಗೆ ಸಾಕಷ್ಟು ವಿದ್ಯಾಭ್ಯಾಸವಿಲ್ಲ ಎಂದು ಸಂಕೋಚ ಪಟ್ಟಿದ್ದರು. ಆದರೆ ಆ ಖಾತೆ ನಿಭಾಯಿಸಲು ಸ್ನಾತಕೋತ್ತರ ಪದವಿಯೇನೂ ಬೇಕಾಗಿಲ್ಲ. ಕೇವಲ ಸಮಸ್ಯೆ ಅರಿತು ಬಗೆಹರಿಸುವ ಬುದ್ಧಿವಂತಿಕೆ ಇದ್ದರೆ ಸಾಕು ಎಂದ ಅವರು, ಈಗ ಜಿ.ಟಿ.ದೇವೇಗೌಡರವರು ಶಿಕ್ಷಣ ಕ್ಷೇತ್ರದಲ್ಲಿ  ಬದಲಾವಣೆ ತರಲು ಮುಂದಾಗಿದ್ದಾರೆ. ಅದೇ ರೀತಿ ವಿವಿಧ ಕಾಲೇಜುಗಳಿಗೂ ಭೇಟಿ ನೀಡಿ ಸಮಸ್ಯೆ ಬಗೆ ಹರಿಸುತ್ತಿರುವುದು ಸಂತಸದ ಸಂಗತಿ ಎಂದರು.

ಈಗಿನ ಬಹುತೇಕ ವಿದ್ಯಾರ್ಥಿಗಳು ಕೇವಲ ಗೈಡ್ ಮೊದಲಾದವನ್ನಷ್ಟೇ ಓದುತ್ತಿದ್ದು, ಪಠ್ಯ ಪುಸ್ತಕಗಳನ್ನೇ ಮುಟ್ಟುವುದಿಲ್ಲ. ಒಮ್ಮೆ ಸಚಿವ ಎನ್.ಮಹೇಶ್ ತಿಳಿಸಿದ ಪದ್ಧತಿ ಜಾರಿಗೆ ಬಂದರೆ, ಎಲ್ಲರೂ ಕಡ್ಡಾಯವಾಗಿ ಪಠ್ಯ ಪುಸ್ತಕ ಓದುತ್ತಾರೆ. ಇದರಿಂದ ಭಾಷಾ ಜ್ಞಾನ, ವಿಷಯ ಜ್ಞಾನವೂ ಹೆಚ್ಚುವುದರ ಜೊತೆಗೆ, ಯಾವ ಪುಟದಲ್ಲಿ ಯಾವ ಉತ್ತರ ಇದೆ ಎಂಬ ತಿಳಿವಳಿಕೆ ದೊರೆಯುವ ಕಾರಣ ಎಲ್ಲರೂ ಪಠ್ಯ ಓದಿಯೇ ಓದುತ್ತಾರೆ ಎಂದರು.

ಜೆಡಿಎಸ್ ಮುಖಂಡರಾದ ನಾಗೇಶ್, ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News