×
Ad

ದಾವಣಗೆರೆ: 2.82 ಕೋಟಿ ರೂ. ಪರಿಹಾರ ನೀಡದ ಕೆಎಸ್‍ಆರ್‍ಟಿಸಿ; 2 ಬಸ್‍ಗಳ ಜಪ್ತಿ

Update: 2018-07-26 22:56 IST

ದಾವಣಗೆರೆ,ಜು.26: 4 ವರ್ಷಗಳ ಹಿಂದೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 2.82 ಕೋಟಿ ರೂ. ಪರಿಹಾರ ನೀಡದ ಕೆಎಸ್‍ಆರ್‍ಟಿಸಿ ಹಾವೇರಿ ಡಿಪೋಕ್ಕೆ ಸೇರಿದ 2 ಬಸ್‍ಗಳನ್ನು ಕೋರ್ಟ್ ಆದೇಶದ ಮೇರೆಗೆ ಗುರುವಾರ ನಗರದಲ್ಲಿ ವಶಪಡಿಸಿಕೊಳ್ಳಲಾಯಿತು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಮಂತಿಗೆ ಗ್ರಾಮದ, ಬೆಂಗಳೂರಿನ ಐಬಿಎಂ ಸಾಫ್ಟ್ ವೇರ್ ಕಂಪೆನಿ ಉದ್ಯೋಗಿಯಾಗಿದ್ದ ಸಂಜೀವ್ ಪಾಟೀಲ್ 6.11.2013ರಂದು ತುಮಕೂರು ಟೋಲ್ ಬಳಿ ಕೆಎಎಸ್‍ಆರ್‍ಟಿಸಿ ಹಾವೇರಿ ಡಿಪೋ ಬಸ್ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಕುಟುಂಬಕ್ಕೆ 2.82 ಕೋಟಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. 

ಕೆಎಎಸ್‍ಆರ್‍ಟಿಸಿ ಬಸ್ಸು ಢಿಕ್ಕಿ ಹೊಡೆದು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೀವ ಪಾಟೀಲರ ಪತ್ನಿ ಗೌರಿ ಎಸ್.ಪಾಟೀಲ ದಾವಣಗೆರೆ ನ್ಯಾಯಾಲಯದ ಮೊರೆ ಹೋಗಿದ್ದಳು. ಮೃತ ಸಂಜೀವ ಪಾಟೀಲಗೆ 2.10 ಲಕ್ಷ ರೂ. ವೇತನವಿದ್ದು, ಈ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ 2,82,42,558 ರು.ಗಳ ಪರಿಹಾರ ನೀಡುವಂತೆ ಇಲ್ಲಿನ 2ನೇ ಹೆಚ್ಚುವರಿ ನ್ಯಾಯಾಲಯ ಕೆಎಎಸ್‍ಆರ್‍ಟಿಸಿ ಹಾವೇರಿ ಡಿಪೋಗೆ ಆದೇಶಿಸಿತ್ತು. 

ಆದರೆ, ನ್ಯಾಯಾಲಯದೆದುರು ಒಪ್ಪಿಕೊಂಡ ಕೆಎಎಸ್‍ಆರ್‍ಟಿಸಿ ಅಧಿಕಾರಿಗಳು ನಂತರ ನ್ಯಾಯಾಲಯದ ಆದೇಶ ಪಾಲಿಸದೇ ಸತಾಯಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ದಾವಣಗೆರೆ ಹೊಸ ಬಸ್ ನಿಲ್ದಾಣದಲ್ಲಿ ಹಾವೇರಿಯಿಂದ ಬೆಂಗಳೂರಿಗೆ ಹೊರಟಿದ್ದ ಹಾಗೂ ಬೆಂಗಳೂರಿನಿಂದ ಹಾವೇರಿಗೆ ವಾಪಾಸ್ಸಾಗುತ್ತಿದ್ದ ಹಾವೇರಿ ಡಿಪೋಗೆ ಸೇರಿದ ಎರಡು ಬಸ್ ಜಪ್ತು ಮಾಡಲಾಯಿತು. ಒಟ್ಟು 8 ಬಸ್ ಜಪ್ತಿ ಮಾಡಲು ನ್ಯಾಯಾಲಯ ಆದೇಶಿಸಿದ್ದು, ಹಾವೇರಿ ಡಿಪೋದ ಇನ್ನೂ 6 ಬಸ್‍ಗಳನ್ನು ಶೀಘ್ರ ಜಪ್ತು ಮಾಡಲಾಗುತ್ತದೆ.

ಹಾವೇರಿ ಡಿಪೋಗೆ ಸೇರಿದ 2 ಕೆಎಎಸ್‍ಆರ್‍ಟಿಸಿ ಬಸ್‍ಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತು ಮಾಡಲಾಗಿದೆ. ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶದಂತೆ ಇಂದು ಹಾವೇರಿ ಡಿಪೋದ 2 ಬಸ್ ವಶಪಡಿಸಿಕೊಳ್ಳಲಾಗಿದೆ ಎಂದು ಅಮೀನ್ ಮಲ್ಲಿಕಾರ್ಜುನ ಸ್ವಾಮಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೃತ ಸಂಜೀವ ಪಾಟೀಲರ ಪತ್ನಿ ಗೌರಿ ಎಸ್. ಪಾಟೀಲ್, ಮೃತರ ಮಾವ, ಹಿರಿಯ ವರ್ತಕ ಕಿರುವಾಡಿ ಸೋಮಣ್ಣ, ಶ್ರೀಧರ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News