ಬುದ್ದಿಮಾಂದ್ಯ ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ

Update: 2018-07-26 17:41 GMT

ಮೈಸೂರು,ಜು.26: ಬುದ್ದಿಮಾಂದ್ಯ ಯುವತಿಯ ಮೇಲಿನ ಅತ್ಯಾಚಾರ ಆರೋಪಿಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ನಾಲ್ಕುಸಾವಿರ ರೂ.ದಂಡ ವಿಧಿಸಿದೆ.

ಶಿವಕುಮಾರ್ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಈತ 2016ರ ಫೆ.23ರಂದು ಬಹಿರ್ದೆಸೆಗೆ ತೆರಳಿದ್ದ ಬುದ್ದಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದ ಎನ್ನಲಾಗಿದ್ದು, ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಯುವತಿ ಗರ್ಭಿಣಿಯಾದ ಬಳಿಕ ಪೋಷಕರಿಗೆ ವಿಷಯ ಗೊತ್ತಾಗಿದ್ದು, ಮದುವೆಯಾಗುವಂತೆ ಯುವತಿಯ ಪೋಷಕರು ಮನವಿ ಮಾಡಿದರೂ ಶಿವಕುಮಾರ್ ಒಪ್ಪದೇ ಬೇರೊಬ್ಬ ಹುಡುಗಿಯ ಜೊತೆ ಮದುವೆಗೆ ಯತ್ನಿಸಿದ್ದ ಎನ್ನಲಾಗಿದೆ.

ಯುವತಿಯ ಪೋಷಕರು ಶಿವಕುಮಾರ್ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇಷ್ಟರಲ್ಲಿ ಗರ್ಭಪಾತವಾಗಿ ಮಗು ಮೃತಪಟ್ಟಿತ್ತು. ಡಿಎನ್ ಎ ಪರೀಕ್ಷೆಯ ಮೂಲಕ ಮಗುವಿನ ತಂದೆ ಶಿವಕುಮಾರ್ ಎಂಬುದು ಸಾಬೀತಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರು ಆರೋಪ ಸಾಬೀತಾದ ಕಾರಣ ಶಿವಕುಮಾರ್ ಗೆ 10 ವರ್ಷ ಜೈಲು, ನಾಲ್ಕು ಸಾವಿರ ರೂ.ದಂಡ ವಿಧಿಸಿ ತೀರ್ಪಿತ್ತಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರದ ಅಭಿಯೋಜಕ ಮಹಾಂತಪ್ಪ ವಾದ ಮಂಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News