×
Ad

ಖಾಸಗಿ ಶಾಲೆ ಮಕ್ಕಳಿಗೂ ಬಸ್‍ ಪಾಸ್ ನೀಡುವ ಬಗ್ಗೆ ಚಿಂತನೆ: ಸಚಿವ ಎನ್.ಮಹೇಶ್

Update: 2018-07-26 23:16 IST

ನಾಗಮಂಗಲ, ಜು.26: ಸರಕಾರಿ ಶಾಲೆ ಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡುವ ಬೇಡಿಕೆ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

ಚುಂಚನಗಿರಿ ಮಠದ ಕಾರ್ಯಕ್ರಮ ನಿಮಿತ್ತ ಗುರುವಾರ ಪಟ್ಟಣಕ್ಕೆ ಆಗಮಿಸಿದ್ದ ಸಚಿವರು, ಮಿನಿವಿಧಾನಸೌಧದ ಮುಂಭಾಗದ ಅಂಬೇಡ್ಕರ್ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದರು. ಸರಕಾರಿ ಶಾಲೆ ಮಕ್ಕಳ ಜತೆಗೆ ಖಾಸಗಿ ಶಾಲಾ ಮಕ್ಕಳಿಗೂ ಉಚಿತ ಬಸ್‍ಪಾಸ್ ನೀಡಲು ಸಿಎಂ ಚಿಂತನೆ ನಡೆಸಿದ್ದು, ಈ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಅವರು ಹೇಳಿದರು. ಈಗಾಗಲೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆದರೆ, ಕೋರಿಕೆ ವರ್ಗಾವಣೆ ಶಿಕ್ಷಕರು ತೊಂದರೆಯಲ್ಲಿದ್ದು, ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಶಿಕ್ಷಣ ಇಲಾಖೆ ಅಭಿವೃದ್ದಿಗಾಗಿ ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ 550 ಕೋಟಿ ರೂ. ನೀಡಿದ್ದು, ಶಾಲಾಕಟ್ಟಡ ರಿಪೇರಿ, ಶೌಚಾಲಯ, ಮೂಲಭೂತ ಸೌಕರ್ಯದೊಂದಿಗೆ ಉತ್ತಮ ಕಲಿಕಾ ವಾತಾವಣರಣ ನಿರ್ಮಾಣಕ್ಕೆ ಅನುದಾನವನ್ನು ಸಮರ್ಪಕವಾಗಿ ಬಳಸಲಾಗುವುದು ಎಂದರು. ಉದ್ಯೋಗ ಮಾರುಕಟ್ಟೆಯಲ್ಲಿ ಇಂಗ್ಲೀಷ್ ಭಾಷೆಗೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲೂ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸಲು ತೀರ್ಮಾನಿಸಲಾಗಿದೆ  ಎಂದು ಸಚಿವರು ತಿಳಿಸಿದರು.

ಶಾಸಕರಿಗೆ ಅಭಿನಂದನೆ: ಮೂರು ವರ್ಷಗಳಿಂದ ನೆಲಮಟ್ಟದಲ್ಲಿ ಅನಾಥವಾಗಿ ನಿಲ್ಲಿಸಿದ್ದ ಅಂಬೇಡ್ಕರ್ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಕಾರಣರಾದ ಶಾಸಕ ಸುರೇಶ್‍ಗೌಡ ಅವರಿಗೆ ಮಹೇಶ್ ಅಭಿನಂದನೆ ಸಲ್ಲಿಸಿದರು. ಈ ಸಂಬಂಧ ನಡೆದ ಹೋರಾಟದಲ್ಲಿ ತಾನೂ, ಅವರೂ ಭಾಗವಹಿಸಿದ್ದನ್ನು ಸ್ಮರಿಸಿದರು. ಅಂಬೇಡ್ಕರ್ ಪ್ರತಿಮೆ ಗದ್ದುಗೆ ಸುತ್ತಲು ಗ್ರಾನೈಟ್ ಹಾಕಿ ಬಾಕಿ ಕೆಲಸ ಶೀಘ್ರ ಮುಗಿಸುವಂತೆ ಕೋರಿದ ಅವರು, ಮುಂದೆ ನಡೆಯುವ ಅಂಬೇಡ್ಕರ್ ಜಯಂತಿಗೆ ತಾನು ಪಾಲ್ಗೊಳ್ಳುವುದಾಗಿ ತಿಳಿಸಿದರು.

ಬಿಎಸ್ಪಿ ಮೈಸೂರು ವಲಯ ಮಟ್ಟದ ಸಂಚಾಲಕ ಎಚ್.ಎನ್.ನರಸಿಂಹಮೂರ್ತಿ, ತಾಲೂಕು ಅಧ್ಯಕ್ಷ ಗಂಗವಾಡಿ ಕುಮಾರ್, ಖಜಾಂಚಿ ಮುಳುಕಟ್ಟೆ ಚಂದ್ರು, ಜಿಲ್ಲಾ ಮುಖಂಡರಾದ ಕೆ.ಎಚ್.ಮಹದೇವ್, ಜೆಡಿಎಸ್ ತಾಲೂಕು ಎಸ್ಸಿ/ಎಸ್ಟಿ ಅಧ್ಯಕ್ಷ ಕಂಚಿನಕೋಟೆ ಮೂರ್ತಿ, ಯುವ ಘಟಕದ ಅಧ್ಯಕ್ಷ ಮುಳುಕಟ್ಟೆ ಸಂತೋಷ,  ಮುಖಂಡರಾದ ಮುಳುಕಟ್ಟೆ ಶಿವರಾಮಯ್ಯ, ಸಿ.ಬಿ.ನಂಜುಂಡಪ್ಪ, ಕದಸಂಸ ತಾಲೂಕು ಅಧ್ಯಕ್ಷ ಬೆಳ್ಳೂರು ಆಟೋ ಶಿವಣ್ಣ ಇತರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News