ಕೊರಟಗೆರೆ: ಗೊರವನಹಳ್ಳಿ ದೇವಾಲಯ ಪಾಲಿಟೆಕ್ನಿಕ್ ಕಾಲೇಜು ಬಂದ್; ವಿದ್ಯಾರ್ಥಿಗಳಿಂದ ಪ್ರತಿಭಟನೆ

Update: 2018-07-26 17:49 GMT

ಕೊರಟಗೆರೆ,ಜು.26: ತಾಲೂಕಿನ ಗೊರವನಹಳ್ಳಿಯಲ್ಲಿ ಮಹಾಲಕ್ಷ್ಮೀ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಪಾಲಿಟೆಕ್ನಿಕ್ ಕಾಲೇಜನ್ನು ಜಿಲ್ಲಾಡಳಿತ ಮುಚ್ಚಲು ಮುಂದಾಗಿರುವುದನ್ನು ಖಂಡಿಸಿ, ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.

ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಹಾಲಕ್ಷ್ಮಿ ಪಾಲಿಟೆಕ್ನಿಕ್ ಕಾಲೇಜನ್ನು ಕಳೆದ ಹತ್ತು ವರ್ಷಗಳ ಹಿಂದೆ ಆರಂಭಿಸಿ ಕಾಲೇಜನ್ನು ಮುನ್ನಡೆಸಿಕೊಂಡು ಹೋಗುತ್ತಿತ್ತು. ಟ್ರಸ್ಟ್ ನ ಆಡಳಿತ ಮಂಡಳಿಯಲ್ಲಿ ಉಂಟಾದ ಗೊಂದಲದಿಂದ ಸರಕಾರ ದೇವಾಲಯ ಸೇರಿದಂತೆ ಇಡೀ ಟ್ರಸ್ಟನ್ನು ವಶಕ್ಕೆ ಪಡೆದಿತ್ತು. ಕಳೆದ ಎರಡು ವರ್ಷಗಳಿಂದಲೂ ಸರಕಾರವೇ ಕಾಲೇಜನ್ನು ನಡೆಸುತ್ತಿದ್ದು, 2018-19ನೇ ಸಾಲಿನಲ್ಲಿ ಏಕಾಎಕಿ ಯಾವುದೇ ಕಾರಣವಿಲ್ಲದೆ ಕಾಲೇಜನ್ನು ಅರ್ಧಕ್ಕೆ ಮುಚ್ಚುವ ನಿರ್ಧಾರ ಕೈಗೊಂಡಿರುವುದರಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 80 ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ವಿದ್ಯಾರ್ಥಿಗಳು ಈಗಾಗಲೇ ಪ್ರಥಮ ವರ್ಷದ ವ್ಯಾಸಂಗ ಮುಗಿಸಿದ್ದು, ಇನ್ನುಳಿದ ಎರಡನೇ ವರ್ಷ ಹಾಗೂ ಮೂರನೇ ವರ್ಷದ ವ್ಯಾಸಂಗಕ್ಕಾಗಿ ಬೇರೆ ಕಾಲೇಜಿನತ್ತ ಮುಖ ಮಾಡಬೇಕಿದೆ. ಆದರೆ ವಿದ್ಯಾರ್ಥಿಗಳು ಇಲ್ಲಿ ಅರ್ಧಕ್ಕೆ ಮೊಟಕು ಗೊಳಿಸಿ ಬೇರೊಂದು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ದುಸ್ಥಿತಿ ನಿರ್ಮಾಣವಾಗಿರುವುದರಿಂದ ವಿದ್ಯಾರ್ಥಿಗಳ ವ್ಯಾಸಂಗದ  ಭವಿಷ್ಯದ ಮೇಲೆ ಪೆಟ್ಟು ಬೀಳುವ ಬಹುತೇಕ ಲಕ್ಷಣಗಳು ಗೋಚರಿಸುತ್ತಿವೆ. ಇದರಿಂದ ಅಸಮಾಧಾನ ಗೊಂಡ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊರವನಹಳ್ಳಿಯ ಪಾಲಿಟೆಕ್ನಿಕ್ ಕಾಲೇಜು ಮುಂಭಾಗ ಕಾಲೇಜು ಮುಂದುವರಿಸುವಂತೆ ಪ್ರತಿಭಟಿಸಿದರು.

ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮಕ್ಕಳ ವಿದ್ಯಾಭ್ಯಾಸದ ಭವಿಷ್ಯದ ದೃಷ್ಟಿಯಿಂದ ಕಾಲೇಜನ್ನು ಮುಂದುವರೆಸುವ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News