ಚಿಕ್ಕಮಗಳೂರು: ಕರ್ತವ್ಯದ ನಡುವೆ ರಸ್ತೆ ಮೇಲೆ ಉರುಳಿದ್ದ ಮರ ತೆರವು ಮಾಡಿದ ಪಿಎಸ್ಸೈ

Update: 2018-07-26 17:59 GMT

ಚಿಕ್ಕಮಗಳೂರು, ಜು.26: ಭಾರೀ ಗಾಳಿಯಿಂದಾಗಿ ರಸ್ತೆ ಮೇಲೆ ಉರುಳಿ ಬಿದ್ದಿದ್ದ ಭಾರೀ ಗಾತ್ರದ ಮರವೊಂದನ್ನು ತೆರವುಗೊಳಿಸುವ ಮೂಲಕ ಜಿಲ್ಲೆಯ ಪೊಲೀಸ್ ಠಾಣೆಯೊಂದರ ಮಹಿಳಾ ಪಿಎಸ್ಸೈ ಅವರ ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿರುವ ಮಲ್ಲಂದೂರು ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಭಾರೀ ಗಾತ್ರದ ಅಕೇಸಿಯಾ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಸ್ಥಳೀಯರು, ಅರಣ್ಯ ಇಲಾಖೆ ಸಿಬ್ಬಂದಿ ಮರ ತೆರವುಗೊಳಿಸಲು ಮುಂದಾಗದೇ ನಿರ್ಲಕ್ಷ್ಯವಹಿಸಿದ್ದರು. ಇದರಿಂದಾಗಿ ಚಿಕ್ಕಮಗಳೂರು-ಆಲ್ದೂರು-ಶೃಂಗೇರಿ ಸಂಪರ್ಕದ ರಸ್ತೆ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ಬಂದ್ ಆಗಿತ್ತು. ಮರ ಬಿದ್ದ ಸ್ಥಳದಲ್ಲಿ ಎರಡೂ ಬದಿಯಲ್ಲಿ ನೂರಾರು ವಾಹನಗಳು ಮುಂದೆ ಸಂಚರಿಸಲಾಗದೇ ಟ್ರಾಫಿಕ್ ಜಾಮ್ ಆಗಿ ದೂರದ ಪ್ರವಾಸಿಗರು ಪರದಾಡುವಂತಾಗಿತ್ತು ಎಂದು ತಿಳಿದು ಬಂದಿದೆ.

ಇದೇ ವೇಳೆ ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಯ ಪಿಎಸ್ಸೈ ಸುನೀತಾ ಅವರು ಎನ್.ಆರ್.ಪುರ ಪಟ್ಟಣದ ನ್ಯಾಯಾಲಯಕ್ಕೆ ಕರ್ತವ್ಯದ ನಿಮಿತ್ತ ಇದೇ ರಸ್ತೆಯಲ್ಲಿ ಆಗಮಿಸಿದ್ದಾರೆ. ರಸ್ತೆ ಮೇಲೆ ಮರ ಬಿದ್ದಿರುವುದನ್ನು ಕಂಡ ಅವರು ಕೂಡಲೇ ವಾಹನದಿಂದ ಇಳಿದು ಮರವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿ ಮರ ತೆರವುಗೊಳಿಸಲು ಮುಂದಾಗಿರುವುದನ್ನು ಕಂಡ ಸ್ಥಳೀಯರು ಹಾಗೂ ವಾಹನ ಚಾಲಕರೂ ಎಸ್ಸೈ ಸುನೀತಾರೊಂದಿಗೆ ಮರ ತೆರವು ಕಾಯಾಚರಣೆಗೆ ಕೈಜೋಡಿಸಿದ್ದಾರೆ. ಇದರಿಂದಾಗಿ ಕೇವಲ ಅರ್ಧ ಗಂಟೆಯಲ್ಲಿ ರಸ್ತೆಗೆ ಅಡ್ಡ ಬಿದ್ದಿದ್ದ ಮರವನ್ನು ತೆರವುಗೊಳಿಸಲಾಯಿತು. ರಸ್ತೆಯಲ್ಲಿದ್ದ ಮರ ತರವಾಗುತ್ತಿದ್ದಂತೆ ಕಾದು ಕಾದು ಹೈರಾಣಾಗಿದ್ದ ಪ್ರವಾಸಿಗರು, ವಾಹನ ಚಾಲಕರು ನಿಟ್ಟುಸಿರು ಬಿಡುತ್ತಾ ಸಂಚಾರ ಆರಂಭಿಸಿದರೆಂದು ತಿಳಿದು ಬಂದಿದೆ.

ಎಸ್ಸೈ ಸುನೀತಾ ಅವರು ಕರ್ತವ್ಯದ ಮೇಲಿದ್ದರೂ ರಸ್ತೆ ಸಂಚಾರ ಸುಗಮಗೊಳ್ಳುವವರೆಗೂ ಸ್ಥಳದಲ್ಲೇ ಇದ್ದು, ಸಾಮಾನ್ಯರಂತೆ ಕೆಲಸ ಮಾಡಿದ್ದ ದೃಶ್ಯಗಳ ಫೋಟೊ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಎಸ್ಸೈ ಕಾರ್ಯಕ್ಕೆ ಸ್ಥಳೀಯರು, ಸಾರ್ವಜನಿಕರು ಹಾಗೂ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News