ಚಿಕ್ಕಮಗಳೂರು: ಬಸವನಹಳ್ಳಿ ಕೆರೆ ನಡುಗಡ್ಡೆ ಸಂಪರ್ಕದ ತೂಗುಸೇತುವೆ ಕಾಮಗಾರಿಗೆ ವಿರೋಧ

Update: 2018-07-26 18:05 GMT

ಚಿಕ್ಕಮಗಳೂರು, ಜು.26: ಗುರುವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರಕ್ಕೆ ಹೊಂದಿಕೊಂಡಿರುವ ಬಸವನಹಳ್ಳಿ ಕೆರೆ ನಡುಗಡ್ಡೆಗೆ 90 ಲಕ್ಷ ರೂ. ವೆಚ್ಚದ ತೂಗು ಸೇತುವೆ ನಿರ್ಮಾಣ ಕಾಮಗಾರಿಗೆ ನಗರಸಭೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಬಸವನಹಳ್ಳಿ ಕೆರೆಯ ನಡುಗಡ್ಡೆ ಸಂಪರ್ಕಕ್ಕೆ ತೂಗು ಸೇತುವೆ ನಿರ್ಮಾಣ ಸಂಬಂಧ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಧ್ಯ ಪ್ರವೇಶಿಸಿ ಮಾತನಾಡಿ, ತೂಗು ಸೇತುವೆ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೇ, ವಿವೇಕಾನಂದರ ಪ್ರತಿಮೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಯಾವ ಪುರುಷಾರ್ಥಕ್ಕೆ ತೂಗು ಸೇತುವೆ ಮಾಡುತ್ತಿದ್ದೀರಿ, ಮೊದಲು ವಿವೇಕಾನಂದರ ಪ್ರತಿಮೆ ಮತ್ತು ನಗರದ ಹದಗೆಟ್ಟ ಪ್ರಮುಖ ರಸ್ತೆಗಳನ್ನು ಸರಿಪಡಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ನಗರಸಭೆ ಉಪಾಧ್ಯಕ್ಷ ಸುಧೀರ್ ಪ್ರತಿಕ್ರಿಯಿಸಿ, ಚಿಕ್ಕಮಗಳೂರು ನಗರವನ್ನು ಪ್ರವಾಸೋದ್ಯಮಕ್ಕೆ ಉತ್ತೇಜಿಸುವ ಸಲುವಾಗಿ ತೂಗು ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ವಿರೂಪಗೊಂಡಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಶೀಘ್ರ ಸರಿಪಡಿಸಲಾಗುವುದು ಎಂದು ಸಮಜಾಯಿಸಿ ನೀಡಿದರು.

ಬಳಿಕ ಸದಸ್ಯೆ ಸುರೇಖಾ ಸಂಪತ್ ಮಾತನಾಡಿ, ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳು ಹಾಳಾಗಿವೆ. ರಸ್ತೆಗಳಲ್ಲಿ ಗುಂಡಿಬಿದ್ದು ಸಂಚಾರವೇ ಅಸಾಧ್ಯವಾಗಿದೆ ಎಂದು ಸಭೆ ಗಮನಕ್ಕೆ ತಂದರು. ಇದಕ್ಕೆ ಧ್ವನಿಗೂಡಿಸಿದ ರೂಬೀನ್ ಮೋಸೆಸ್, ಗೌರಿ ಕಾಲುವೆಯ ರಸ್ತೆಗಳು ಹಾಳಾಗಿವೆ. 90 ಲಕ್ಷ ರೂ. ಅನುದಾನವನ್ನು ಮೊದಲು ವಾರ್ಡ್‌ಗಳ ರಸ್ತೆ ಸರಿಪಡಿಸಲು ವಿನಿಯೋಗಿಸಿ. ಪ್ರಯೋಜನವಿಲ್ಲದ ತೂಗು ಸೇತುವೆ ಕಾಮಗಾರಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಎಂ.ಜಿ.ರಸ್ತೆ, ಆರ್.ಜಿ.ರಸ್ತೆ, ಐ.ಜಿ. ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಗರಸಭೆಯಿಂದ ಬಹಿರಂಗ ಹರಾಜು ಮಾಡುವ ವಿಚಾರ ಸಭೆಯಲ್ಲಿ ಪ್ರಸ್ತಾಪಿಸುತ್ತಿದ್ದಂತೆ ಸದಸ್ಯ ದೇವರಾಜ್ ಶೆಟ್ಟಿ ಮಾತನಾಡಿ, ಪಾರ್ಕಿಂಗ್‌ಗೆ ನಗರಸಭೆಯಿಂದ ಬಹಿರಂಗ ಹರಾಜು ಮಾಡುವುದು ಉತ್ತಮ ನಿರ್ಧಾರ ಇದರಿಂದ ನಗರಸಭೆಗೂ ಹೆಚ್ಚಿನ ಆದಾಯ ಬರಲಿದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ಎಚ್.ಡಿ.ತಮ್ಮಯ್ಯ ಧ್ವನಿಗೂಡಿಸಿ, ವಾರಾಂತ್ಯದಲ್ಲಿ ನಗರದ ಎಂ.ಜಿ.ರಸ್ತೆ ಮತ್ತು ಐಜಿ ರಸ್ತೆಗಳಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ತಕ್ಷಣ ಹರಾಜು ಪ್ರಕ್ರಿಯೆಯನ್ನು ಕಾರ್ಯಗತ ಮಾಡುವಂತೆ ಒತ್ತಾಯಿಸಿದರು.

ಸದಸ್ಯೆ ಕವಿತಾಶೇಖರ್ ಮಾತನಾಡಿ, ನೀರಿನ ಸಮಸ್ಯೆ ಇದ್ದರಿಂದ 4ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ. ನಗರಕ್ಕೆ ನೀರು ಪೂರೈಕೆ ಮಾಡುವ ಹಿರೇಕೊಳಲೆ ಮತ್ತು ಯಗಚಿಯಲ್ಲಿ ಸಾಕಷ್ಟು ನೀರಿದೆ. 4 ದಿನದ ಬದಲು 3ದಿನಕ್ಕೊಮ್ಮೆ ನೀರು ನೀಡುವಂತೆ ಸಭೆಯ ಗಮನಕ್ಕೆ ತಂದರು. ಸಂಬಂಧಿಸಿದ ಅಧಿಕಾರಿ ಮಾತನಾಡಿ, ಇಡೀ ನಗರಕ್ಕೆ 16 ಎಂಟಿಸಿ ನೀರು ಬೇಕು. ಆದರೆ 8 ಎಂಟಿಸಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಒಂದೇ ನೀರು ಶುದ್ಧೀಕರಣ ಘಟಕದಿಂದ ಮಾತ್ರ ಪೂರೈಕೆ ಮಾಡಲಾಗುತ್ತಿದೆ ಎಂದಾಗ, ನಗರಸಭೆ ಆಯುಕ್ತೆ ತುಷಾರಮಣಿ ಮಾತನಾಡಿ, ಹೊಸ ನೀರು ಶುದ್ಧೀಕರಣ ಘಟಕಕ್ಕೆ ಅನುಮತಿ ನೀಡಲಾಗಿದೆ ಎಂದರು. ಇದಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಶೀಘ್ರವೇ ಹೊಸ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡುವಂತೆ ಸೂಚಿಸಿದರು.

ಸಭೆಯಲ್ಲಿ ಸದಸ್ಯರಾದ ಶ್ಯಾಮಲಾ ರಾವ್, ಅಪ್ಸರ್ ಅಹ್ಮದ್, ಶ್ರೀನಿವಾಸ್ ಸೇರಿದಂತೆ ಎಲ್ಲ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News