ಕಾರ್ಗಿಲ್ ವಿಜಯ ದಿನ ಭಾರತೀಯರ ಹೆಮ್ಮೆ: ನಿವೃತ್ತ ಹವಾಲ್ದಾರ್ ಪ್ರಕಾಶ್ ಶೆಟ್ಟಿ
ಚಿಕ್ಕಮಗಳೂರು, ಜು.26: ಸೈನಿಕ, ಕೃಷಿಕ ಮತ್ತು ಕಾರ್ಮಿಕ ಈ ದೇಶದ ಬೆನ್ನೆಲುಬು, ಜನತೆ ಈ ಮೂವರನ್ನೂ ಗೌರವಾದರಗಳಿಂದ ಕಾಣಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ಪ್ರಕಾಶ್ ಶೆಟ್ಟಿ ಸಲಹೆ ನೀಡಿದ್ದಾರೆ.
ನಗರ ಹೊರವಲಯದ ಇನ್‌ಫ್ಯಾಂಟ್ ಜೀಸಸ್ ಶಾಲೆಯಲ್ಲಿ ಗುರುವಾರ ನಡೆದ ಕಾರ್ಗಿಲ್ ವಿಜಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರಕಕ್ಕೆ ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.
ಪಾಕಿಸ್ತಾನಿ ಸೈನಿಕರನ್ನು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹೋರಾಡಿ ಹಿಮ್ಮೆಟ್ಟಿಸಿ ವಿಜಯ ಸಾಧಿಸಿದ ನಮ್ಮ ಯೋಧರ ಯಶೋಗಾಥೆಯನ್ನು ಸಾರುವ ಕಾರ್ಗಿಲ್ ವಿಜಯ ದಿನ ನಿಜಕ್ಕೂ ಭಾರತೀಯರು ಹೆಮ್ಮೆ ಪಡುವ ದಿನ. ಈ ಸಂಭ್ರಮದ ಹಿಂದೆ ಅನೇಕ ಸೈನಿಕರ ಬಲಿದಾನವಿದೆ. ಅವರ ಕುಟುಂಬದವರ ರೋದನವಿದೆ ಎಂಬುದನ್ನು ನಾವು ಮರೆಯಬಾರದು ಎಂದು ನುಡಿದರು.
ವಿಜಯೋತ್ಸವದ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು. ಕಾರ್ಗಿಲ್ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ವಂದನೆ ಸಲ್ಲಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಇದೇ ಸಂದರ್ಭ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಹವಾಲ್ದಾರ್ ರೋಡ್ರಿಗಸ್, ಚಂದ್ರೇಶ್, ರವಿಪ್ರಕಾಶ್, ಗಂಗೇಗೌಡ, ಕಲ್ಲೇಗೌಡ, ಶಾಲೆಯ ಉಪಪ್ರಾಂಶುಪಾಲ ಅಮರ್ ಲೋಬೊ, ಫಾದರ್ ಅನಿಲ್ ಕುಮಾರ್, ವಸ್ತಾರೆ ಗ್ರಾ.ಪಂ. ಅಧ್ಯಕ್ಷ ವಿ.ಪಿ.ರವಿ, ಎಐಬಿಎಂ ಕಾಲೇಜಿನ ಉಪನ್ಯಾಸಕ ಡಾ. ಪ್ರದೀಪ್ ಜಿ.ದೇಸಾಯಿ, ಎಂ.ಎನ್.ರವಿ, ತೇಗೂರು ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.