ಕೊಪ್ಪ: ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಲಕ್ಷಾಂತರ ಮೌಲ್ಯದ ಮನೆ ಸಾಮಾಗ್ರಿ ಸಂಪೂರ್ಣ ಭಸ್ಮ

Update: 2018-07-26 18:11 GMT

ಕೊಪ್ಪ,ಜು.26: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಗ, ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಮನೆ ಸಾಮಾಗ್ರಿ ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಶ್ಯಾನುವಳ್ಳಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. 

ಕಟ್ಟಡ ಕಾರ್ಮಿಕ ಮಂಜು ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಬಂಗಾರದ ಆಭರಣ, 10000 ಕ್ಕೂ ಹೆಚ್ಚು ನಗದು, ಟಿ.ವಿ. ಮಿಕ್ಸಿ, ಗ್ರೈಂಡರ್, ಟೈಲರಿಂಗ್ ಮಿಷನ್, ಬಟ್ಟೆ ಬರೆಗಳು, ಪಾತ್ರೆಗಳು, ದಿನಬಳಕೆ ವಸ್ತು, ಪೀಠೋಪಕರಣ ಸೇರಿದಂತೆ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಮಂಜು ಪತ್ನಿ ಯಶೋಧ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಒಕ್ಕೂಟ ಅಧ್ಯಕ್ಷೆಯಾಗಿದ್ದು, ಬುಧವಾರ ಮಧ್ಯಾಹ್ನ ಅವರ ಮನೆಯಲ್ಲಿ ಆ ಭಾಗದ ವಿವಿಧ ಸಂಘಗಳ ಸಭೆ ನಡೆದಿತ್ತು. ಸಂಘಗಳ ಸದಸ್ಯರಿಂದ ಸಂಗ್ರಹಿಸಿದ್ದ ಉಳಿತಾಯ ಮತ್ತು ಸಾಲದ ಕಂತಿನ ಹಣವೂ ಮನೆಯಲ್ಲೇ ಇಟ್ಟಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಕೊಪ್ಪ ಅಗ್ನಿಶಾಮಕದಳ ಮತ್ತು ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ. ಘಟನೆಯ ಕುರಿತು ಮಂಜು ಹರಿಹರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಎನ್. ರಾಮಸ್ವಾಮಿ, ತಾಲ್ಲೂಕು ಪಂಚಾಯತ್ ಸದಸ್ಯೆ ಮಂಜುಳಾ ಮಂಜುನಾಥ್, ಕಿರಣ್ ಎಂ.ಕೆ. ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾಕರ್ ಶೆಟ್ಟಿ, ಹರಿಹರಪುರ ಪಿಎಸ್‍ಐ ಸೋಮಶೇಖರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News