ದೇಶದೊಳಗೆ ಅಘೋಷಿತ ಆಹಾರ ದಿಗ್ಬಂಧನ!

Update: 2018-07-27 04:11 GMT

ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಂಪು ನಂಬಿಸುತ್ತಿರುವಾಗಲೇ ದೇಶದ ರಾಜಧಾನಿ ಹೊಸ ದಿಲ್ಲಿಯಲ್ಲಿ ಹಸಿವಿನಿಂದ ತೀವ್ರವಾಗಿ ಬಳಲಿ, ಮೂವರು ಎಳೆ ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮಕ್ಕಳ ದೇಹದಲ್ಲಿ ಆಹಾರ ಮತ್ತು ನೀರಿನ ಅಂಶವೇ ಇರಲಿಲ್ಲ ಮತ್ತು ಹೊಟ್ಟೆ ಸಂಪೂರ್ಣ ಖಾಲಿಯಿತ್ತು ಎನ್ನುವುದು ಮರಣೋತ್ತರ ವರದಿಯಿಂದ ಬಹಿರಂಗವಾಗಿದೆ. ಈಗಾಗಲೇ ಘಟನೆಯ ಕುರಿತಂತೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತನಿಖೆಗೆ ಆದೇಶ ನೀಡಿದ್ದಾರೆ. ಮಕ್ಕಳು ಹಸಿವಿನಿಂದಲೇ ಮೃತಪಟ್ಟಿದ್ದಾರೆ ಎನ್ನುವುದನ್ನು ಆಸ್ಪತ್ರೆ ದೃಢಪಡಿಸಿದೆ. ನಮ್ಮನ್ನಾಳುವವರು ‘ಈ ದೇಶದ ಜನರು ಯಾವ ಆಹಾರ ತಿನ್ನಬೇಕು, ತಿನ್ನಬಾರದು’ ಎನ್ನುವುದರ ಚರ್ಚೆಯಲ್ಲಿ ಮೈಮರೆತಿರುವಾಗಲೇ ನಡೆದಿರುವ ಈ ಘಟನೆ ಭಾರತದ ವರ್ತಮಾನದ ವಿರೋಧಾಭಾಸಗಳಿಗೆ ಕನ್ನಡಿ ಹಿಡಿದಿದೆ. ದಿಲ್ಲಿಯ ಯಾವುದೋ ಮೂಲೆಯ ಯಾವುದೋ ಗುಡಿಸಲಿನಲ್ಲಿ ಮೂವರು ಮಕ್ಕಳು ಹಸಿವಿನಿಂದ ಸತ್ತರೆ ಅದಕ್ಕೆ ತಾನು ಹೇಗೆ ಹೊಣೆಯಾಗುತ್ತೇನೆ ಎಂದು ಸರಕಾರ ಕೇಳಬಹುದು? ಒಂದು ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿ ನಾಗರಿಕ ಸಮಾಜದಲ್ಲಿ ಬದುಕುತ್ತಿರುವ ಪ್ರಜೆಗಳ ಬದುಕುವ ಹಕ್ಕುಗಳನ್ನು ಎಲ್ಲೋ ಹಂತಹಂತವಾಗಿ ಕಿತ್ತುಕೊಳ್ಳುವ ಪ್ರಯತ್ನವೊಂದು ನಡೆಯುತ್ತಿದೆ ಎನ್ನುವುದನ್ನು ಇದು ಹೇಳುತ್ತಿದೆ ಎನ್ನುವುದನ್ನು ಸರಕಾರ ಮರೆಯಬಾರದು.

ಅಪೌಷ್ಟಿಕತೆ ಈ ದೇಶದ ಅತಿ ದೊಡ್ಡ ಸಮಸ್ಯೆ. ಇಂದಿಗೂ ಬದುಕಿರುವ ಶೇ. 40ರಷ್ಟು ಮಕ್ಕಳು ಈ ದೇಶದಲ್ಲಿ ಅಪೌಷ್ಟಿಕತೆಯಿಂದ ಬೇರೆ ಬೇರೆ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆೆ. ದೇಶದ ಪಾಲಿಗೆ ಹಸಿವೇ ರೋಗವಾಗಿ ಮಾರ್ಪಾಡಾಗಿದೆ. ಆದರೂ ಕೇಂದ್ರ ಸರಕಾರ ಈ ಅಪೌಷ್ಟಿಕತೆಯನ್ನು ಎದುರಿಸುವಲ್ಲಿ ಸಮಗ್ರ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ ಎನ್ನುವುದಕ್ಕೆ ಈ ಸಾವುಗಳೇ ಉದಾಹರಣೆ. ಅಪೌಷ್ಟಿಕತೆಯನ್ನು ಪರಿಹರಿಸಲು ಮಾರ್ಗ ಹುಡುಕುವುದು ಪಕ್ಕಕ್ಕಿರಲಿ. ಬೇರೆ ಬೇರೆ ಗುರುತು ಚೀಟಿಗಳ ಹೆಸರಿನಲ್ಲಿ ಜನರ ಕೈಯಿಂದ ಅವರ ಅತ್ಯಗತ್ಯ ಆಹಾರ, ಆರೋಗ್ಯ ಸಾಧನಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಇಂದು ನಡೆಯುತ್ತಿದೆ. ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕಾಗಿ ರೇಷನ್ ನಿರಾಕರಿಸಿದ ಘಟನೆ ದೇಶದ ಹಲವೆಡೆ ಬೆಳಕಿಗೆ ಬಂತು. ಈ ಕಾರಣದಿಂದ ಹಸಿವಿನಿಂದ ಮೃತಪಟ್ಟ ಘಟನೆಗಳೂ ವರದಿಯಾದವು. ಕರ್ನಾಟಕವೂ ಇಂತಹದೊಂದು ದುರ್ಘಟನೆಗೆ ಸಾಕ್ಷಿಯಾಯಿತು. ಇದರ ಜೊತೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕಾಗಿ ಬಡವರಿಗೆ ಔಷಧಿಗಳನ್ನು ನಿರಾಕರಿಸಿದ ಘಟನೆಯೂ ಮಾಧ್ಯಮಗಳಲ್ಲಿ ವರದಿಯಾಗಿವೆ.

ನೋಟು ನಿಷೇಧದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಜೊತೆಗೆ ಜನರು ತೀವ್ರವಾದ ಆಹಾರದ ಅಭಾವವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಸಮೀಕ್ಷೆಯೊಂದು ಈಗಾಗಲೇ ಹೇಳಿದೆ. ಗ್ರಾಮೀಣ ಉದ್ದಿಮೆಗಳು ನೆಲಕಚ್ಚಿರುವುದರಿಂದ, ನಗರಗಳಲ್ಲಿ ಕಟ್ಟಡ ಕಾರ್ಮಿಕರ ಕೆಲಸಗಳಲ್ಲೂ ತೀವ್ರ ಇಳಿಮುಖವಾಗಿರುವುದರಿಂದ ಅತ್ತ ಹಳ್ಳಿಗೂ ಮರಳಲಾಗದೆ, ನಗರಗಳಲ್ಲೂ ಉಳಿಯಲಾಗದೆ ಅತಂತ್ರದಲ್ಲಿದ್ದಾರೆ. ಇವರ ಕುಟುಂಬಗಳೂ ಬೀದಿಗೆ ಬಿದ್ದಿವೆ. ಊಟವೇ ಕಷ್ಟವಾಗಿರುವಾಗ ಇನ್ನು ಇವರು ಔಷಧಿ, ಬಟ್ಟೆ, ಶಿಕ್ಷಣ ಇತ್ಯಾದಿಗಳ ಬಗ್ಗೆ ಗಮನ ಕೊಡುವುದು ಹೇಗೆ ಸಾಧ್ಯ? ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಹೈನೋದ್ಯಮ ಸಂಪೂರ್ಣ ಇಳಿಮುಖವಾಗುತ್ತಿದೆ. ಜನರು ತಮ್ಮ ಕಷ್ಟ ಕಾಲದಲ್ಲಿ ಹಟ್ಟಿಯಲ್ಲಿರುವ ದನಗಳನ್ನು ಮಾರಾಟ ಮಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮಾರಾಟ ಮಾಡಲೆಂದು ರೈತರು ಸಾಗಿಸುವ ಸಾಕಿದ ಹಸುಗಳು ನಕಲಿ ಗೋರಕ್ಷಕರ ಪಾಲಾಗುತ್ತಿವೆ. ಗೋರಕ್ಷಕರಿಂದ ಗೋಶಾಲೆಗೆ ರವಾನೆಯಾಗಿ, ಅಲ್ಲಿಂದ ಅವುಗಳು ನಿಗೂಢವಾಗಿ ಕಣ್ಮರೆಯಾಗುತ್ತಿವೆ ಅಥವಾ ಬೃಹತ್ ಮಾಂಸ ಸಂಸ್ಕರಣಾ ಘಟಕಗಳನ್ನು ಸೇರುತ್ತಿವೆ. ಹೈನುಗಾರಿಕೆಯಿಂದ ಅಲ್ಪಸ್ವಲ್ಪ ಬದುಕುಕಂಡುಕೊಂಡಿದ್ದವರೂ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಿಗಳಾಗಬೇಕಾಗಿದೆ. ಇದು ಗ್ರಾಮೀಣ ಪ್ರದೇಶಗಳಲ್ಲೂ, ನಗರ ಪ್ರದೇಶಗಳಲ್ಲೂ ಏಕಕಾಲದಲ್ಲಿ ತಳಸ್ತರದಲ್ಲಿರುವ ಜನರನ್ನು ತಬ್ಬಿಬ್ಬುಗೊಳಿಸಿದೆ. ತಮ್ಮ ಮಕ್ಕಳಿಗೆ ಹೊಟ್ಟೆತುಂಬಾ ಆಹಾರ ಪೂರೈಕೆ ಮಾಡುವುದು ಅವರಿಂದ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಈ ದೇಶದಲ್ಲಿ ಹಸಿವು, ಅಪೌಷ್ಟಿಕತೆ ಹೆಚ್ಚುತ್ತಿರುವ ದಿನಗಳಲ್ಲೇ, ಆರೆಸ್ಸೆಸ್‌ನ ತಲೆಗೆಟ್ಟ ನಾಯಕನೊಬ್ಬ ‘ಗೋಮಾಂಸವನ್ನು ಬಳಸುವುದನ್ನು ಬಿಡಿ’ ಎಂದು ಕರೆಕೊಟ್ಟಿದ್ದಾನೆ. ಯಾರದೋ ದುಡಿಮೆಯಲ್ಲಿ ಹೊಟ್ಟೆ ತುಂಬಾ ಉಣ್ಣುವವನಷ್ಟೇ ಇಂತಹದೊಂದು ಹೇಳಿಕೆಯನ್ನು ನೀಡಬಹುದು. ಗೋಮಾಂಸ ಈ ದೇಶದ ಬಹುಸಂಖ್ಯಾತರ ಆಹಾರ. ಮುಖ್ಯವಾಗಿ ತಳಸ್ತರದ ಜನರು, ಬಡವರನ್ನು ಪೌಷ್ಟಿಕವಾಗಿ ಉಳಿಸಿರುವ ಆಹಾರವಾಗಿದೆ. ಇದನ್ನು ಅವರಿಂದ ಕಿತ್ತುಕೊಳ್ಳುವುದೇನೋ ಸುಲಭ. ಪರ್ಯಾಯವಾಗಿ ಸರಕಾರ ಅವರಿಗೆ ಬೇರೆ ಯಾವ ಆಹಾರವನ್ನು ಒದಗಿಸುತ್ತದೆ? ಇಂದು ದೇಶ ಗೋಮಾಂಸ ರಫ್ತಿನಲ್ಲಿ ಅಗ್ರಸ್ಥಾನದಲ್ಲಿದೆ. ಅಂದರೆ ದೇಶದ ಪೌಷ್ಟಿಕ ಆಹಾರವನ್ನು ಅದು ವಿದೇಶಗಳಿಗೆ ಸಾಗಿಸಿ ಅವರ ಹಸಿವನ್ನು ತಣಿಸುವಲ್ಲಿ ಆತುರವಾಗಿದೆ. ಇದೇ ಸಂದರ್ಭದಲ್ಲಿ ದೇಶದ ಬಡವರಿಗೆ ಗೋಮಾಂಸವನ್ನು ತಿನ್ನಬೇಡಿ ಎಂದು ಬೇರೆ ಬೇರೆ ರೀತಿಯಲ್ಲಿ ಒತ್ತಡ ಹೇರುತ್ತಿದೆ. ಏಕಾಏಕಿ ಗೋಮಾಂಸ ಆಹಾರವನ್ನು ನಿಷೇಧಿಸಿದರೆ ಅದರಿಂದ ಈ ದೇಶದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಬಹುದೊಡ್ಡದು. ಗೋಮಾಂಸ ಆಹಾರವನ್ನು ಬೇರೆ ಬೇರೆ ರೀತಿಯಲ್ಲಿ ಸಮಾಜದ ಬೇರೆ ಬೇರೆ ವರ್ಗಗಳು ಆಶ್ರಯಿಸಿಕೊಂಡಿವೆೆ. ಗೋವುಗಳನ್ನು ಸಾಕುವ ರೈತರ ಪಾಲಿಗೆ ಗೋಮಾಂಸಾಹಾರಿಗಳು ಆಪದ್ಬಾಂಧವರು.

ಹಟ್ಟಿಯಲ್ಲಿರುವ ಹಾಲು ಕೊಡದ ಹಸುಗಳು, ಹಾಗೆಯೇ ಎತ್ತುಗಳನ್ನು ಅವರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ಕಾರಣದಿಂದಲೇ ಹೈನೋದ್ಯಮದ ಭಾಗವಾಗಿ ಮಾಂಸಾಹಾರಿಗಳು ಗುರುತಿಸಲ್ಪಡುತ್ತಾರೆ. ಇದೇ ಸಂದರ್ಭದಲ್ಲಿ ಗೋಮಾಂಸವನ್ನು ಪೂರೈಸುವಲ್ಲಿ ಲಕ್ಷಾಂತರ ಕಸಾಯಿಖಾನೆಗಳು ಕೆಲಸ ಮಾಡುತ್ತಿವೆ. ಅವರೆಲ್ಲರಿಗೂ ಅದು ಉದ್ಯೋಗವನ್ನು ಕೊಟ್ಟಿವೆ. ಅವರ ಬದುಕು ಅದರಿಂದ ನಡೆಯುತ್ತಿದೆ. ಹಾಗೆಯೇ ಇದು ಈ ದೇಶಕ್ಕೆ ಅಗತ್ಯವಾಗಿರುವ ಚರ್ಮಗಳನ್ನೂ ಪೂರೈಸುತ್ತಿವೆ. ಇಂದು ನಕಲಿ ಗೋರಕ್ಷಕರಿಂದ ಚರ್ಮೋದ್ಯಮವೂ ಬಿಕ್ಕಟ್ಟಿನಲ್ಲಿದೆ. ಅಲ್ಲಿನ ಕಾರ್ಮಿಕರೂ ಬೀದಿಪಾಲಾಗುವ ಆತಂಕದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಗೋಮಾಂಸ ಪೂರೈಕೆಯಲ್ಲಿ ಇಳಿಕೆಯಾಗುತ್ತಿರುವುದರಿಂದ ದರವೂ ಅಧಿಕವಾಗುತ್ತಿದೆ. ಗೋಮಾಂಸ ಇಳಿಕೆಯಾಗುತ್ತಿರುವುದರಿಂದ ಇತರ ಮಾಂಸಗಳ ಬೆಲೆ ದುಪ್ಪಟ್ಟಾಗಿದೆ. ತರಕಾರಿಗಳ ದರವೂ ಏರುತ್ತಿದೆ.

ಕಡಿಮೆ ದರದಲ್ಲಿ ಅತಿ ಪೌಷ್ಟಿಕಾಂಶವನ್ನು ಹೊಂದಿರುವ ಮಾಂಸವನ್ನು ಪಡೆಯಲು ವಿಫಲರಾಗಿರುವ ಬಡವರು, ತರಕಾರಿ ಅಥವಾ ದುಪ್ಪಟ್ಟು ಬೆಲೆಕೊಟ್ಟು ಕುರಿ, ಕೋಳಿ ತಿನ್ನುವಂತಹ ಸ್ಥಿತಿಯಲ್ಲಿಲ್ಲ. ಒಟ್ಟಿನಲ್ಲಿ ನಕಲಿ ಗೋರಕ್ಷಕರ ರಾಜಕೀಯ ಈ ದೇಶದ ವಿವಿಧ ಆರ್ಥಿಕ ವಲಯ ಕ್ಷೇತ್ರಗಳ ಮೇಲೆ ಮಾತ್ರವಲ್ಲ, ಈ ದೇಶದ ಪೌಷ್ಟಿಕತೆಯ ಮೇಲೂ ಭಾರೀ ಆಘಾತವನ್ನು ಉಂಟು ಮಾಡುತ್ತಿದೆ. ಇದು ಸ್ಪಷ್ಟವಾಗಿ ಬದುಕುವ ಹಕ್ಕಿನ ನಿರಾಕರಣೆಯಾಗಿದೆ. ಆಹಾರ ದಿಗ್ಬಂಧನವಾಗಿದೆ. ಯಾರು ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎನ್ನುವುದನ್ನು ಚರ್ಚಿಸುವಂತಹ ಸ್ಥಿತಿಯಲ್ಲಿ ದೇಶ ಇಲ್ಲ ಎನ್ನುವುದನ್ನು ದಿಲ್ಲಿಯಲ್ಲಿ ನಡೆದಿರುವ ಹಸಿವಿನ ಮಾರಣಹೋಮ ನಮಗೆ ತಿಳಿಸಿಕೊಡುತ್ತಿದೆ. ಇಂದು ನಾವು ಹೆಚ್ಚುತ್ತಿರುವ ಅಪೌಷ್ಟಿಕತೆಯನ್ನು, ಹಸಿವನ್ನು ತಡೆಯುವ ಮಾರ್ಗ ಯಾವುದು ಎನ್ನುವುದರ ಕುರಿತು ಚರ್ಚಿಸಬೇಕಾಗಿದೆ. ಗೋರಕ್ಷಕರ ಗುಂಪು ಹತ್ಯೆ ಹೇಗೆ ಚರ್ಚಿಸಲ್ಪಡುತ್ತಿದೆಯೋ ಹಾಗೆಯೇ, ಈ ಹಸಿವಿನಿಂದ ಸಾಯುತ್ತಿರುವ ಕಂದಮ್ಮಗಳು ಸಂಸತ್ತಿನಲ್ಲಿ ಚರ್ಚೆಯ ವಿಷಯವಾಗಬೇಕು. ಬಡವರು ನಿಧಾನಕ್ಕೆ ನಾಗರಿಕ ಸಮಾಜದೊಳಗೆ ಎದುರಿಸುತ್ತಿರುವ ಆಹಾರ ದಿಗ್ಬಂಧನಕ್ಕೆ ಕಾರಣ ಏನು ಮತ್ತು ಯಾರು ಎನ್ನುವುದು ತನಿಖೆಯಾಗಬೇಕಾಗಿದೆ, ಪರಿಹಾರ ಹುಡುಕಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News