ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ‘ತೆಲಂಗಾಣ ಮಾದರಿ’ ಹೋರಾಟ: ಶಾಸಕ ಶ್ರೀರಾಮುಲು

Update: 2018-07-27 12:36 GMT

ಬಳ್ಳಾರಿ, ಜು.27: ಉತ್ತರ ಕರ್ನಾಟಕಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅನ್ಯಾಯ ಮಾಡಿದರೆ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ನಡೆದ ಹೋರಾಟದ ಮಾದರಿಯಲ್ಲಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಯಲಿದೆ ಎಂದು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಮುಖ್ಯಮಂತ್ರಿ ಈ ಭಾಗದ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ. ಇದೇ ರೀತಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮುಂದುವರೆದರೆ ದೊಡ್ಡ ಕ್ರಾಂತಿಯೇ ನಡೆಯಲಿದೆ ಎಂದರು.

ನನಗೆ ರಾಜಕೀಯ ಮುಖ್ಯ ಅಲ್ಲ, ನನ್ನ ಜನ ನನಗೆ ಮುಖ್ಯ. ಅಧಿಕಾರಕ್ಕೆ ನಾನು ಎಂದೂ ಅಂಟಿಕೊಂಡು ಕೂತವನಲ್ಲ. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.

ಅಖಂಡ ಕರ್ನಾಟಕ ಉಳಿಯಬೇಕು ಎಂಬುದು ನಮ್ಮ ಉದ್ದೇಶ, ಬಯಕೆ. ಆದರೆ, ಪದೇ ಪದೇ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೆ ನಾನೇಕೆ ನೋಡಿಕೊಂಡು ಸುಮ್ಮನೆ ಕೂತಿರಬೇಕು. ರೈತರ ಸಾಲ ಮನ್ನಾ, ಮಹಾದಾಯಿ ಹೋರಾಟಗಾರರು ಹಾಗೂ ಉತ್ತರ ಕರ್ನಾಟಕ ಭಾಗದ ರೈತರ ಬಗ್ಗೆ ಮುಖ್ಯಮಂತ್ರಿ ಅಗೌರವದಿಂದ ಆಡಿರುವ ಮಾತುಗಳನ್ನು ಸಹಿಸಿಕೊಂಡಿರಬೇಕೆ ಎಂದು ಶ್ರೀರಾಮುಲು ಪ್ರಶ್ನಿಸಿದರು.

ಮುಖ್ಯಮಂತ್ರಿ ಆದವರಿಗೆ ರಾಜ್ಯದ ಎಲ್ಲ ಭಾಗಗಳು ಸಮಾನವಾಗಿರಬೇಕು. ಉತ್ತರ ಕರ್ನಾಟಕ ಭಾಗದವರು ಇವರಿಗೆ ಮತ ಹಾಕಲಿಲ್ಲ ಎಂದರೆ ಈ ರೀತಿ ಅಗೌರವದಿಂದ ಮಾತನಾಡುವುದು ಸರಿಯೇ? ಅವರು ಕೆಲವು ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಹಾಸನ, ಮಂಡ್ಯ, ರಾಮನಗರ ಬಿಟ್ಟು ಬೇರೆ ಜಿಲ್ಲೆಗಳಿಗೆ ಹೋಗುತ್ತಿಲ್ಲ. ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ನೆರೆ ಹಾವಳಿ ಬಂದರೂ ಆ ಕಡೆ ಹೋಗಿಲ್ಲ. ಕೃಷ್ಣಾ ನದಿ ಉಕ್ಕಿ ಹರಿದರೂ ಈ ಕಡೆ ಬರಲಿಲ್ಲ. ಬೆಳಗಾವಿಯಲ್ಲಿದ್ದ ಕೆಶಿಪ್ ಸಂಸ್ಥೆಯನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ. ಇದರ ಅಗತ್ಯವೇನಿತ್ತು? ಎಂದು ರಾಮುಲು ಪ್ರಶ್ನಿಸಿದರು.

ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದ ಕುಮಾರಸ್ವಾಮಿ, ಅಧಿಕಾರಕ್ಕೆ ಬಂದು ಎರಡು ತಿಂಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿಲ್ಲ. ವಿಧಾನಸೌಧ, ವಿಕಾಸಸೌಧದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ. ಮೊದಲು ಮುಖ್ಯಮಂತ್ರಿ ಹಾಗೂ ಕೆಲ ಸಚಿವರ ಮನೆ ಮುಂದೆ ವರ್ಗಾವಣೆಗಾಗಿ ಸೂಟ್‌ಕೇಸ್ ಹಿಡಿದುಕೊಂಡು ನಿಂತಿರುವವರನ್ನು ನಿಯಂತ್ರಿಸಲಿ ಎಂದು ಅವರು ಆಗ್ರಹಿಸಿದರು.

ರಾಜ್ಯದ 16 ಜಿಲ್ಲೆಗಳಲ್ಲಿ ಜೆಡಿಎಸ್ ಶಾಸಕರಿಲ್ಲ, 100 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿದ್ದೀರಿ. ಆದರೂ, ನೀವು ರಾಜ್ಯದ ಮುಖ್ಯಮಂತ್ರಿ ಆಗಿದ್ದೀರಾ. ರಾಜ್ಯದ ಎಲ್ಲ ಕ್ಷೇತ್ರಗಳನ್ನು ಸಮಾನವಾಗಿ ಕಾಣುವುದು ಬಿಟ್ಟು, ಜೆಡಿಎಸ್ ಶಾಸಕರು ಇಲ್ಲದ ಕ್ಷೇತ್ರಗಳಿಗೆ ಅನುದಾನ ಕಡಿತಗೊಳಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

ರೈತರ ಸಾಲ ಮನ್ನಾ ಕುರಿತು ಹೊರಡಿಸಿರುವ ಆದೇಶವು ಇನ್ನೂ ಅನುಷ್ಠಾನವಾಗಿಲ್ಲ. ಇದೊಂದು ನಿಷ್ಕ್ರಿಯವಾದ ಸರಕಾರವಾಗಿದ್ದು, ಕೇವಲ ವರ್ಗಾವಣೆ ದಂಧೆಗೆ ಮಾತ್ರ ಸೀಮಿತವಾಗಿದೆ. ಎಷ್ಟು ದಿನ ಈ ಸರಕಾರ ಅಧಿಕಾರದಲ್ಲಿ ಇರುತ್ತೋ ಎಂಬ ಭಯ ಆಡಳಿತ ನಡೆಸುತ್ತಿರುವವರಿಗೆ ಕಾಡುತ್ತಿದೆ ಎಂದು ರಾಮುಲು ಹೇಳಿದರು.

ಹಿಟ್ಲರ್ ಆಡಳಿತ :ಮಾಧ್ಯಮದವರನ್ನು ವಿಧಾನಸೌಧ ಪ್ರವೇಶಕ್ಕೆ ನಿರ್ಬಂಧ ಹೇರಲು ಮುಂದಾಗುವ ಮೂಲಕ ಮುಖ್ಯಮಂತ್ರಿ ಹಿಟ್ಲರ್ ರೀತಿಯಲ್ಲಿ ಆಡಳಿತ ನಡೆಸಲು ಹೊರಟಿದ್ದಾರೆ. ಉತ್ತರ ಕರ್ನಾಟಕದಿಂದ ಚುನಾಯಿತರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಜೆಟ್‌ನಲ್ಲಿ ಈ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತದಿರುವುದು ವಿಷಾದದ ಸಂಗತಿ.

-ಶ್ರೀರಾಮಲು , ಬಿಜೆಪಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News