ಚಿಕ್ಕಮಗಳೂರು: ಸಾವಿನ ಭೀತಿಯಿಂದ ಗ್ರಾಮ ತೊರೆದ ಹಕ್ಕಿಪಿಕ್ಕಿ ಸಮುದಾಯ

Update: 2018-07-27 13:21 GMT

ಚಿಕ್ಕಮಗಳೂರು,ಜು.27: ಮೂಢನಂಬಿಕೆಗೆ ಬಲಿಯಾದ ಸಮುದಾಯದ ನೂರಾರು ಜನರು ಸಾವಿನ ಭೀತಿಯಿಂದಾಗಿ ತಾವು ವಾಸವಿದ್ದ ಜಾಗ, ಮನೆ, ಆಸ್ತಿಪಾಸ್ತಿ, ಸಾಕು ಪ್ರಾಣಿಗಳನ್ನು ಸ್ಥಳದಲ್ಲೇ ಬಿಟ್ಟು ಗ್ರಹಣದ ಹಿಂದಿನ ದಿನ ರಾತ್ರೋರಾತ್ರಿ ಗ್ರಾಮ ತೊರೆದು ಗುಳೇ ಹೋಗಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ.

ಎನ್.ಆರ್.ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸಿಗುವಾನಿ ಗ್ರಾಮದಲ್ಲಿ ಘಟನೆ ವರದಿಯಾಗಿದೆ. ಈ ಗ್ರಾಮದಲ್ಲಿ ಕಂದಾಯ ಇಲಾಖೆ ನೀಡಿದ್ದ ಜಾಗದಲ್ಲಿ ಕಳೆದ 25 ವರ್ಷಗಳಿಂದ ವಾಸವಿದ್ದ ಹಕ್ಕಿಪಿಕ್ಕಿ ಹಾಗೂ ಹಾವು ಗೊಲ್ಲ ಸಮುದಾಯದವರು ಬೇರೆಡೆಯಿಂದ ತಾಲೂಕಿಗೆ ವಲಸೆ ಬಂದಿದ್ದರು. ಇವರಿಗೆ ತಾಲೂಕು ಆಡಳಿತ ಬಾಳೆ ಗ್ರಾ.ಪಂ ವ್ಯಾಪ್ತಿಯ ಸುಗವಾನಿ ಗ್ರಾಮದ ಬಿ.ಎಚ್.ಕೈಮರ ಸರ್ಕಲ್‍ನಲ್ಲಿ ನಿವೇಶನಗಳನ್ನು ನೀಡಿದ್ದರಿಂದ ಸಮುದಾಯದ 60ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ನೆಲೆ ಕಂಡು ಕೊಂಡಿದ್ದವು. ಆರಂಭದಲ್ಲಿ ಜೀವನೋಪಾಯಕ್ಕಾಗಿ ಕಾಡು ಕೋಣಿಯಂತಹ ಪಕ್ಷಿ, ಹಕ್ಕಿಗಳನ್ನು ಭೇಟೆಯಾಡಿ ಮಾರಾಟ ಮಾಡುತ್ತಿದ್ದ ಈ ಸಮುದಾಯದವರು ಇತ್ತೀಚೆಗೆ ಸಮೀಪದ ಕಾಫಿ, ಅಡಿಕೆ, ರಬ್ಬರ್ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾ ಜೀವನ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ.

ಕಳೆದ ಅನೇಕ ವರ್ಷಗಳಿಂದ ಇಲ್ಲಿಯೇ ವಾಸವಿದ್ದ ಈ ಕುಟುಂಬಗಳಿಗೆ ತಾಲೂಕು ಆಡಳಿತ ಪಡಿತರ ಚೀಟಿ, ಮತದಾನದ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಗ್ರಾಪಂ ವತಿಯಿಂದ ಸಾಮೂಹಿಕ ಶೌಚಾಲಯಗಳಂತಹ ಮೂಲಸೌಕರ್ಯಗಳನ್ನು ಕಲ್ಪಿಸಿದೆ. ಆದರೆ ನಿವಾಸಿಗಳು ವಾಸವಿರುವ ಜಾಗ ಸಂಬಂಧ ಕಂದಾಯ ಹಾಗೂ ಅರಣ್ಯ ಇಲಾಖೆಗಳ ಗೊಂದಲಗಳಿಂದಾಗಿ ನಿವೇಶನಗಳಿಗೆ ಇನ್ನೂ ಹಕ್ಕು ಪತ್ರ ನೀಡಲು ಸಾಧ್ಯವಾಗಿಲ್ಲ. ಇದರಿಂದಾಗಿ ಈ ಕಟುಂಬಗಳಿಗೆ ಆಶ್ರಯಮನೆಗಳ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಸಾಕಷ್ಟು ಮೂಢಾಚರಣೆ ಅನುಸರಿಸುತ್ತಿದ್ದ ಈ ಕುಟುಂಬಗಳ ಪೈಕಿ ಕಳೆದ 4 ವರ್ಷಗಳಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿಂತಿತರಾಗಿದ್ದ ಸಮುದಾಯದ ಮುಖಂಡರು ಇತ್ತೀಚೆಗೆ ಮಲೆಯಾಳಿ ಮಾಂತ್ರಿಕನೊಬ್ಬನ ಬಳಿಗೆ ಹೋಗಿ ತಮ್ಮ ಸಮುದಾಯದಲ್ಲಿ ಹೆಚ್ಚುತ್ತಿರುವ ಸಾವಿನ ರಹಸ್ಯದ ಬಗ್ಗೆ ತಿಳಿಸಿ ಪರಿಹಾರ ಸೂಚಿಸುವಂತೆ ಕೇಳಿಕೊಂಡಿದ್ದರೆನ್ನಲಾಗಿದೆ. ಇದಕ್ಕೆ ಮಲೆಯಾಳಿ ಜ್ಯೋತಿಷಿಯು, ಇಡೀ ಸಮುದಾಯದ ಜನರು ಬರಲಿರುವ ಗ್ರಹಣದ ಒಳಗಾಗಿ ಗ್ರಾಮವನ್ನು ತೊರೆದು ಬೇರೆಡೆಗೆ ಹೋಗಬೇಕು. ತಪ್ಪಿದಲ್ಲಿ ಸಾವಿನ ಸಂಖ್ಯೆ ಹೆಚ್ಚಲಿದೆ. ಗ್ರಹಣದ ದಿನ ಗ್ರಾಮದಲ್ಲಿ ಮೂವರು ಸಾವನ್ನಪ್ಪಲಿದ್ದಾರೆ. ಉಳಿದವರು ರಕ್ತಕಾರಿ ಸಾಯಲಿದ್ದಾರೆಂದು ಹೇಳಿ ಹೆದರಿಸಿದ್ದ ಎಂದು ತಿಳಿದು ಬಂದಿದೆ.

ಮಲೆಯಾಳಿ ಮಾಂತ್ರಿಕನ ಮಾತು ನಂಬಿದ ಸಮುದಾಯದ ಎಲ್ಲಾ ಸದಸ್ಯರು ಶುಕ್ರವಾರದಂದು ಗ್ರಹಣದ ದಿನ ರಕ್ತಕಾರಿ ಸಾಯುವ ಭೀತಿಯಿಂದಾಗಿ ಗುರುವಾರ ರಾತ್ರೋರಾತ್ರಿ ಗಂಟು ಮೂಟೆ ಕಟ್ಟಿ ತಾಲೂಕಿನ ಕುದ್ರೆಗುಂಡಿ ಮಾರ್ಗವಾಗಿ ತೀರ್ಥಹಳ್ಳಿ ಕಡೆಗೆ ಗುಳೇ ಹೋಗಿದ್ದಾರೆಂದು ಸಿಗುವಾನಿ ಗ್ರಾಮದ ಪಕ್ಕದ ಗ್ರಾಮಸ್ಥರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಗ್ರಾಮದಲ್ಲಿ ಈ ಸಮುದಾಯದ ಸುಮಾರು 60 ಮನೆಗಳಿದ್ದು, ಬಹುತೇಕ ಕುಟುಂಬಗಳು ಗುಡಿಸಲುಗಳಲ್ಲಿಯೇ ವಾಸವಿದ್ದಾರೆ. ಗುರುವಾರ ರಾತ್ರೋರಾತ್ರಿ ಗ್ರಾಮ ತೊರೆಯುವ ಮುನ್ನ ನಿವಾಸಿಗಳು ಪಾತ್ರೆ, ಬಟ್ಟೆ ಬರೆಗಳನ್ನು ಕೊಂಡೊಯ್ದಿದ್ದಾರೆ. ಆದರೆ ತಾವು ಸಾಕುತ್ತಿದ್ದ ನಾಯಿ, ಹಂದಿ, ಕುರಿ, ಕೋಳಿ ಮತ್ತಿತರ ಪ್ರಾಣಿ, ಪಕ್ಷಿಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆಂದು ತಿಳಿ ತಿಳಿದು ಬಂದಿದೆ. ಹೋಗುವ ಮುನ್ನ ಮತ್ತೆಂದೂ ಈ ಗ್ರಾಮದತ್ತ ತಲೆ ಹಾಕದಿರಲು ನಿರ್ಧರಿಸಿದ್ದರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸಿಗುವಾನಿ ಗ್ರಾಮದಲ್ಲಿ ವಾಸಿಸುತ್ತಿದ್ದ ಈ ಸಮುದಾಯದವರು ಹೆಚ್ಚುತ್ತಿದ್ದ ಸಾವಿನ ಸಂಖ್ಯೆಯಿಂದ ಭಯಭೀತರಾಗಿದ್ದರು. ಈ ಮಧ್ಯೆ ಗ್ರಹಣದ ದಿನ ಸಮೀಪಿಸುತ್ತಿರುವುದರಿಂದ ಮತ್ತಷ್ಟು ಆತಂಕಕ್ಕೀಡಾಗಿದ್ದ ನಿವಾಸಿಗಳು ಇದಕ್ಕೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷಿಯ ಬಳಿ ಹೋಗಿದ್ದಾರೆ. ಆತ ರಕ್ತಕಾರಿ ಸಾಯುವ ಭೀತಿ ಹುಟ್ಟಿಸಿದ್ದರಿಂದ ಬಡ ಕುಟುಂಬಗಳು ಸಾವಿನ ಭೀತಿಯಿಂದ ಮನೆ ಮಠ ಬಿಟ್ಟು ಗ್ರಾಮ ತೊರೆದು ಹೋಗಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ನಿವಾಸಿಗಳು ಗ್ರಾಮ ತೊರೆದ ಸುದ್ದಿ ತಿಳಿಯುತ್ತಿದ್ದಂತೆ ಎನ್.ಆರ್.ಪುರ ತಾಲೂಕಿನ ಕಂದಾಯ ಇಲಾಖಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಗುರುವಾರ ಸಂಜೆ ಈ ಸಮುದಾಯದ ನಿವಾಸಿಗಳು ಗೂಡ್ಸ್ ವಾಹನಗಳಲ್ಲಿ ಸಾಮಾನುಗಳನ್ನು ತುಂಬಿಕೊಂಡು ಹೋಗಿದ್ದು, ಈ ವೇಳೆ ದಾರಿ ಮಧ್ಯೆ ಸಿಕ್ಕಿದ ಪತ್ರಕರ್ತರೊಬ್ಬರು ವಿಚಾರಿಸಿದಾಗ, 'ತಮ್ಮ ಸಮುದಾಯಕ್ಕೆ ಕೇರಳದ ಮಾಂತ್ರಿಕರು ಮಾಟ ಮಾಡಿಸಿದ್ದಾರೆಂದು ಜ್ಯೋತಿಷಿ ತಿಳಿಸಿದ್ದು, ಗ್ರಾಮ ತೊರೆಯದಿದ್ದರೆ ರಕ್ತಕಾರಿ ಸಾಯುತ್ತೇವೆ. ನಾವು ಇಲ್ಲಿ ವಾಸವಿರಲು ಸಾಧ್ಯವಿಲ್ಲ. ಜೀವ ಉಳಿಸಿಕೊಳ್ಳಲು ಬೇರೆಡೆ ಹೋಗುತ್ತಿದ್ದೇವೆ ಎಂದು ವಾಹನದಲ್ಲಿದ್ದ ಮಹಿಳೆಯರು, ಪುರುಷರು ಹೇಳಿದ್ದಾರೆಂದು ತಿಳಿದು ಬಂದಿದೆ.

ಅನೇಕ ವರ್ಷಗಳಿಂದ ಇಲ್ಲಿಯೇ ವಾಸವಿದ್ದು, ಸ್ಥಳೀಯರ ತೋಟಗಳಲ್ಲಿ ಕಾರ್ಮಿಕರಾಗಿದ್ದ ಬಡ ಜನತೆ ಮೂಢನಂಬಿಕೆಯಿಂದ ಹೀಗೆ ಗುಳೇ ಹೊರಟಿದ್ದಾರೆ. ಇಲ್ಲಿನ ಗ್ರಾಮಸ್ಥರೊಂದಿಗೆ ಈ ಸಮುದಾಯದ ಜನತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮುಗ್ಧ ಬಡ ಜನರನ್ನು ಜ್ಯೋತಿಷ್ಯದ ಹೆಸರಿನಲ್ಲಿ ವಂಚಿಸುವುದು ಅಪರಾಧ. ತಾಲೂಕು ಆಡಳಿತ ಈ ನಿವಾಸಿಗಳ ಮನವೊಲಿಸಿ ಇಲ್ಲಿಯೇ ನೆಲೆಸುವಂತೆ ಮಾಡಬೇಕು. ನಿವೇಶನಕ್ಕೆ ಹಕ್ಕುಪತ್ರ ನೀಡಬೇಕು. ಮೂಢನಂಬಿಕೆಗಳ  ಬಗ್ಗೆ ಅರಿವು ಮೂಡಿಸಬೇಕು ಎಂದು ಸ್ಥಳೀಯ ನಿವಾಸಿ ಕ್ಸೇವಿಯರ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News