×
Ad

ಕಳಸ: ಎರಡನೇ ದಿನವೂ ಪತ್ತೆಯಾಗದ ಕಿರನ್; ಭದ್ರಾ ನದಿಯಲ್ಲಿ ಮುಂದುವರಿದ ಶೋಧ

Update: 2018-07-27 22:36 IST

ಚಿಕ್ಕಮಗಳೂರು, ಜು.27: ಜಿಲ್ಲೆಯ ಕಳಸ ಪಟ್ಟಣದ ಅಂಬಾತೀರ್ಥ ಎಂಬಲ್ಲಿ ಗುರುವಾರ ನದಿ ಕಾಲು ಜಾರಿ ಬಿದ್ದು, ಭದ್ರಾ ನದಿ ನೀರಿನಲ್ಲಿ ಕೊಚ್ಚಿ ಹೋಗಿರುವ ಯುವಕ ಕಿರನ್ ಕೋಟ್ಯಾನ್ ಅವರ ಮೃತ ದೇಹ ಶುಕ್ರವಾರವೂ ಪತ್ತೆಯಾಗಿಲ್ಲ. ಶುಕ್ರವಾರ ಬೆಳಗಿನಿಂದ ಸಂಜೆಯವರೆಗೂ ಶೋಧ ನಡೆಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಬರೀಗೈಲಿ ಹಿಂದಿರುಗಿದ್ದಾರೆ.

ಗುರುವಾರ ಮಂಗಳೂರು ಮೂಲದ 13 ಯುವಕರ ತಂಡ ಕುದುರೆಮುಖ, ಕಳಸಕ್ಕೆ ಟಿಟಿ ವಾಹನದಲ್ಲಿ ಪ್ರವಾಸಕ್ಕೆ ಬಂದಿದ್ದು, ಈ ಯುವಕರು ಕಳಸ ಪಟ್ಟಣ ಸಮೀಪ ಹರಿಯುವ ಭದ್ರಾ ನದಿ ತೀರದ ಅಂಬಾತೀರ್ಥ ಎಂಬಲ್ಲಿಗೆ ಪ್ರವಾಸ ಕೈಗೊಂಡಿದ್ದು, ಈ ವೇಳೆ ಸೆಲ್ಪೀ ತೆಗೆಯುತಿದ್ದ ಕಿರನ್ ಕೋಟ್ಯಾನ್ ಎಂಬಾತ ಬಂಡೆ ಕಲ್ಲಿನ ಮೇಲೆ ನಿಂತಿದ್ದಾಗ ಕಾಲು ಜಾರಿ ನದಿಗೆ ಬಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನಿಂದ ಗುರುವಾರ ಹಾಗೂ ಶುಕ್ರವಾರ ನದಿ ತೀರದಲ್ಲಿ ಬೋಟ್ ಹಾಗೂ ಮುಳುಗು ತಜ್ಞರೊಂದಿಗೆ ಹುಡುಕಾಡ ನಡೆಸಿದ್ದಾರೆ. ಆದರೆ ಶುಕ್ರವಾರ ಸಂಜೆವರೆಗೂ ಕಿರನ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಗುರುವಾರ ಸಂಜೆ ಮಂಗಳೂರಿನ ತುಂಬೆಯಿಂದ ಕಿರನ್‍ ಪೋಷಕರು ಕಳಸ ಪಟ್ಟಣಕ್ಕೆ ಆಗಮಿಸಿದ್ದು, ನದಿ ತೀರದಲ್ಲಿ ಕಿರನ್ ಸಂಬಂಧಿಕರು ಪೊಲೀಸರೊಂದಿಗೆ ಹುಡುಕಾಟಲ್ಲಿ ತೊಡಗಿದ್ದರು. ಈ ವೇಳೆ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು. ಘಟನೆ ಹಿನ್ನೆಲೆಯಲ್ಲಿ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಜಿಲ್ಲಾಡಳಿತ ಕಿರನ್ ಹುಡುಕಾಟಕ್ಕೆ ಅಗತ್ಯ ನೆರವು ಒದಗಿಸಿದೆ ಎಂದು ತಿಳಿದು ಬಂದಿದೆ

ಗುರುವಾರ ಕಳಸ ಪಟ್ಟಣಕ್ಕೆ ಟಿಟಿ ವಾಹನದಲ್ಲಿ ಪ್ರವಾಸಕ್ಕೆ ಆಗಮಿಸಿದ್ದ ಮಂಗಳೂರು ಮೂಲದ ಯುವಕರು ಗಣಪತಿಕಟ್ಟೆ ಬಳಿಯ ಅಂಬಾತೀರ್ಥಕ್ಕೆ ಹೋಗುವ ರಸ್ತೆಯಲ್ಲಿರುವ ಅಂಗಡಿ ಬಳಿ ವಾಹನ ನಿಲ್ಲಿಸಿದ್ದಾರೆ. ಈ ವೇಳೆ ಅಂಗಡಿ ಮಾಲಕರು ಯುವಕರಿಗೆ ಅಂಬಾತೀರ್ಥಕ್ಕೆ ಮಳೆಗಾಲದಲ್ಲಿ ಯಾರೂ ಹೋಗುವುದಿಲ್ಲ. ತುಂಬಾ ಅಪಾಯಕಾರಿಯಾದ ಜಾಗ, ನೀವು ಹೋಗಬೇಡಿ ಎಂದು ತಿಳಿಸಿದ್ದಾರೆ. ಆದರೆ ಯುವಕರು ಈ ಮಾತನ್ನು ಕಿವಿಗೆ ಹಾಕಿಕೊಂಡಿಲ್ಲ. 
- ಟಿಟ್ಟು ಥಾಮಸ್, ವ್ಯಾಪಾರಸ್ಥ, ಕಳಸ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News