ಭಾವೈಕ್ಯತೆ, ಅಭಿವೃದ್ಧಿಯಿಂದ ದೇಶ ಕಟ್ಟಬೇಕು: ನಿಜಗುಣಾನಂದ ಸ್ವಾಮೀಜಿ

Update: 2018-07-27 17:59 GMT

ಮಂಡ್ಯ, ಜು.27: ಧರ್ಮಾಧಾರಿತ ರಾಜಕಾರಣ ನಿಲ್ಲಬೇಕು. ಭಾವೈಕ್ಯತೆ ಮತ್ತು ಅಭಿವೃದ್ಧಿಯಿಂದ ದೇಶ ಕಟ್ಟಬೇಕು ಎಂದು ಬೆಳಗಾವಿಯ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ನಗರದ ಕಲಾಮಂದಿರದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶವೊಂದು ಹಡಗು. ಈ ಹಡಗನ್ನು ತೂತುಮಾಡಿ ಮುಳುಗಿಸುವುದನ್ನು ಬಿಟ್ಟು ಸುರಕ್ಷಿತವಾಗಿ ದಡ ಸೇರಲು ಧಾರ್ಮಿಕ ಮುಖಂಡರು ಹಾಗೂ ರಾಜಕಾರಣಿಗಳು ಮುಂದಾಗಬೇಕು ಎಂದು ಅವರು ಮಾರ್ಮಿಕವಾಗಿ ಹೇಳಿದರು.

ವೈಜ್ಞಾನಿಕವಾಗಿ ದಾಪುಗಾಲು ಹಾಕುತ್ತಿದ್ದರೂ ಪ್ರಪಂಚದಲ್ಲಿ ಇನ್ನೂ ಅಜ್ಞಾನ ತುಂಬಿತುಳುಕುತ್ತಿದೆ. ಅಂಧಾಚಾರ, ಕಂದಾಚಾರಗಳು ವಿಜೃಂಭಿಸುತ್ತಿವೆ. ಜೋತಿಷ್ಯ, ಭವಿಷ್ಯದ ಹೆಸರಲ್ಲಿ ಜನರ ಬೌದ್ಧಿಕ ಶೋಷಣೆಯಾಗುತ್ತಿದೆ ಎಂದು ಅವರು ವಿಷಾದಿಸಿದರು. ಜನರು ಇಂದ್ರಬಲ, ಚಂದ್ರಬಲ, ಜೋತಿಷ್ಯಬಲದಿಂದ ಬದುಕಲು ಸಾಧ್ಯವಿಲ್ಲ, ತೋಳ್ಬಲದಿಂದ ಬದುಕಬೇಕು. ಈ ನಿಟ್ಟಿನಲ್ಲಿ ಮೂಢನಂಬಿಕೆ, ಕಂದಾಚಾರ ಬಿಟ್ಟು ಕಾಯಕದಿಂದ ಬದುಕಬೇಕು ಎಂದು ಅವರು ಕರೆ ನೀಡಿದರು. ಮುಂದಿನ ತಲೆಮಾರಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಆಳುವವರು, ಧಾರ್ಮಿಕ ಮುಖಂಡರು ಸೇರಿದಂತೆ ಪ್ರತಿಯೊಬ್ಬರೂ ಗಂಭೀರವಾಗಿ ಚಿಂತಿಸಬೇಕು. ಜಾತಿ ಬಿಟ್ಟು ಪ್ರೀತಿಯಿಂದ ಸಮಾಜ ಕಟ್ಟಬೇಕು ಎಂದು ಅವರು ಹೇಳಿದರು.

ಸ್ವಾಮೀಜಿಗಳೂ ಸಾಮಾನ್ಯ ಮನುಷ್ಯರು, ಅವರನ್ನು ಪವಾಡಪುರುಷರಂತೆ ನೋಡಬಾರದು. ಮಡಿ, ಮೈಲಿಗೆ, ಜಾತಿ ವ್ಯವಸ್ಥೆಯಿಂದ ಜನರನ್ನು ಮುಕ್ತಿಗೊಳಿಸುವವನೇ ನಿಜವಾದ ಸ್ವಾಮೀಜಿ ಎಂದು ಅವರು ಅಭಿಪ್ರಾಯಪಟ್ಟರು.

ವಚನ ಚಳವಳಿ ಅತಿ ದೊಡ್ಡ ಕ್ರಾಂತಿ:

ರಷ್ಯ ಕ್ರಾಂತಿ, ಫ್ರಾನ್ಸ್ ಕ್ರಾಂತಿ ಒಳಗೊಂಡಂತೆ ಅನೇಕ ಕ್ರಾಂತಿಗಳು ಈ ಜಗತ್ತಿನಲ್ಲಿ ನಡೆದಿದೆ. ಆದರೆ, ಈ ಎಲ್ಲಾ ಕ್ರಾಂತಿಗಳಿಗಿಂತಲೂ ಅತಿ ದೊಡ್ಡ ಕ್ರಾಂತಿ ವಚನ ಚಳವಳಿ. ಸಮಸಮಾಜ ನಿರ್ಮಾಣದಲ್ಲಿ ವಚನ ಚಳವಳಿ ಸಾರ್ವಕಾಲಿಕ ದಾಖಲೆ ಎಂದು ಅವರು ವಿಶ್ಲೇಷಿಸಿದರು. ಮಹಿಳೆಯರೂ ಸೇರಿದಂತೆ ವ್ಯವಸ್ಥೆಯಲ್ಲಿ ಕಡೆಗಣಿಸಲ್ಪಟ್ಟಿದ್ದ ಎಲ್ಲಾ ತಳಸಮುದಾಯವನ್ನು ತಮ್ಮ ಅನುಭವ ಮಂಟಪಕ್ಕೆ ತಂದರು. ಆ ಕಾಲಕ್ಕೆ 12 ಸಾವಿರ ವೇಶ್ಯೆಯರನ್ನು ಶರಣೆಯರನ್ನಾಗಿ ಮಾಡಿದರು. ಸೂಳೆ ಸಂಕವ್ವ ವಚನಕಾರ್ತಿಯಾಗಿ ಹೊರಹೊಮ್ಮಿದಳು ಎಂದು ಅವರು ವಿವರಿಸಿದರು.

ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಯ್ಯ ಮುಂತಾದ ತಳಸಮುದಾಯದ ವಚನಕಾರರಿಗೆ ಉನ್ನತ ಸ್ಥಾನ ಕಲ್ಪಿಸಿ ಜಾತಿ ಮುಖ್ಯವಲ್ಲ, ಪ್ರತಿಭೆ, ಕಾಯಕ ಶ್ರೇಷ್ಠ ಎಂದು ಬಸವಣ್ಣನವರು ತೋರಿಸಿಕೊಟ್ಟರು ಎಂದು ಅವರು ತಿಳಿಸಿದರು.

ಕರ್ನಾಟಕವೆಂದರೆ ಬಸವಣ್ಣ, ಬಸವಣ್ಣನೆಂದರೆ ಕರ್ನಾಟಕ. ಬಸವಣ್ಣನನ್ನು ಮರೆತರೆ ಕರ್ನಾಕಟವೆಂಬುದು ಬರಿ ಸೊನ್ನೆ ಎಂಬ ಸಾಹಿತಿ ಡಾ.ದೇ.ಜವರೇಗೌಡರ ಬರಹದ ಸಾಲನ್ನು ಉಲ್ಲೇಖಿಸಿದ ಸ್ವಾಮೀಜಿ, ಆದರೆ, ಬಸವಣ್ಣನವರನ್ನು ಕರ್ನಾಟಕ ಅರ್ಥಮಾಡಿಕೊಳ್ಳಲಿಲ್ಲವೆಂದು ವಿಷಾದಿಸಿದರು.

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಷಹಜಹಾನ್, ಹಿಂದುಳಿದ ವರ್ಗಗಳ ಮುಖಂಡರಾದ ಹುಚ್ಚೇಗೌಡ, ಎಲ್.ಸಂದೇಶ್, ಎಂ.ಬಿ.ಶ್ರೀನಿವಾಸ್, ನಾಗರಾಜು, ಎಂ.ಬಿ.ಶ್ರೀನಿವಾಸ್, ಆಂಜನಪ್ಪ, ಪ್ರೊ.ಬಿ.ಜಯಪ್ರಕಾಶಗೌಡ, ಎಂ.ಗುರುಪ್ರಸಾದ್, ಎಂ.ಶಿವಕುಮಾರ್, ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವರಾಜು, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್, ಉಪವಿಭಾಗಾಧಿಕಾರಿ ರಾಜೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿದೇರ್ಶಕಿ ಎಂ.ಶಾಂತಮ್ಮ, ಇತರ ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಿಂದ ಕಲಾಮಂದಿರದವರಗೆ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ರೈತ ಬಹಳ ದೊಡ್ಡವನು, ದೇವರು. ಆತನ ತನು ಶುದ್ಧ ಮನ ಶುದ್ಧ. ನಾನು ರೈತವಿರೋಧಿಯಲ್ಲ, ಉಪನ್ಯಾಸ ಕಾರ್ಯಕ್ರಮದಲ್ಲಿ ರೈತರು ವ್ಯಸನಮುಕ್ತರಾಗಬೇಕೆಂದು ಹೇಳಿದ್ದೆ ಅಷ್ಟೆ. ಆದರೆ, ಕೆಲವರು ತಪ್ಪು ತಿಳಿದುಕೊಂಡು ಬಿಟ್ಟರು.
-ನಿಜಗುಣಾನಂದ ಸ್ವಾಮೀಜಿ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News