"ಬಾಲ್ಯವಿವಾಹದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಪ್ರಥಮ"

Update: 2018-07-27 18:03 GMT

ನಾಗಮಂಗಲ, ಜು.27: ರಾಜ್ಯದಲ್ಲೆ ಮಂಡ್ಯ ಜಿಲ್ಲೆ ಬಾಲ್ಯವಿವಾಹ ಪ್ರಕರಣಗಳಲ್ಲಿ ಪ್ರಥಮ ಸ್ಥಾನದಲ್ಲಿದ್ದು, ತಡೆಗಟ್ಟಲು ಅಧಿಕಾರಿಗಳಿಂದ ಸಂಪೂರ್ಣ ಸಹಕಾರ ಸಿಗುತ್ತಿಲ್ಲ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಮಿಕ್ಕೆರೆ ವೆಂಕಟೇಶ್ ಆರೋಪಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ  ತಹಶೀಲ್ದಾರ್ ನಂಜುಂಡಯ್ಯ ನೇತೃತ್ವದಲ್ಲಿ ಮಕ್ಕಳ ಹಕ್ಕು ಮತ್ತು ರಕ್ಷಣೆ ಕುರಿತು ನಡೆದ ತಾಲೂಕುಮಟ್ಟದ ಅಧಿಕಾರಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ಕಿರುಕುಳ ಸೇರಿದಂತೆ ಇತರೆ 7000 ಸಾವಿರ ಪ್ರಕರಣಗಳು ಮಂಡ್ಯ ಜಿಲ್ಲೆಯಲ್ಲಿವೆ. ನಾಗಮಂಗಲದಲ್ಲಿ ಈ ವರ್ಷದಲ್ಲಿ 34 ಪ್ರಕರಣಗಳಿವೆ. ನಮ್ಮ ಮಕ್ಕಳ ಕಲ್ಯಾಣ ಸಮಿತಿಗೆ, ಚೈಲ್ಡ್ ಹೆಲ್ಪ್ ಲೈನ್‍ಗೆ ದಿನನಿತ್ಯ ಮಕ್ಕಳ ಮೇಲಿನ ಪ್ರಕರಣಗಳ ಬಗ್ಗೆ ಹಲವು ದೂರುಗಳು ಬರುತ್ತಿವೆ. ಪ್ರಕರಣ ಭೇದಿಸಲು ತಾಲೂಕು ಮಟ್ಟದ ಅಧಿಕಾರಿಗಳಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಬಾಲ್ಯ ವಿವಾಹ ತಡೆಗೆ ತೆರಳಿದ ಅಧಿಕಾರಿಗಳಿಗೆ ಸ್ಥಳೀಯ ಮಟ್ಟದ ಗ್ರಾಮ ಪಂಚಾಯತ್, ಅಂಗನವಾಡಿ, ಇದೆಲ್ಲಕ್ಕೂ ಮಿಗಿಲಾಗಿ ಪೊಲೀಸ್ ಇಲಾಖೆಯಿಂದ ಹೆಚ್ಚು ಭದ್ರತೆ ನೀಡಬೇಕು. ಅಲ್ಲದೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸ್ಥಳಿಯ ಮಟ್ಟದಲ್ಲಿ ಹಮ್ಮಿಕೊಳ್ಳಬೇಕು ಎಂದು ಅವರು ಹೇಳಿದರು.

ಆದಿಚುಂಚನಗಿರಿ ಮಠದಲ್ಲೆ ಹೆಚ್ಚು ಬಾಲ್ಯ ವಿವಾಹಗಳು
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಆದಿಚುಂಚನಗಿರಿ ಮಠದಲ್ಲಿ ಹೆಚ್ಚು ಹೊರಗಿನ ಜನರು, ಭಕ್ತರು ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಇಲ್ಲಿಯೇ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತವೆ ಎಂಬ ಮಾಹಿತಿ ಇದೆ ಎಂದು ಸಿಡಿಪಿಓ ಇಲಾಖೆ ಮೇಲ್ವಿಚಾರಕಿ ರೂಪ ಸಭೆಗೆ ತಿಳಿಸಿದರು.

ನಾವು ಸಾಕಷ್ಟು ಬಾರಿ ಖಚಿತ ಮಾಹಿತಿ ಆದರಿಸಿ ಸ್ಥಳಕ್ಕೆ ಹೋದಾಗ ನಮಗೆ ಯಾಮಾರಿಸಿ ಮದುವೆ ಮಾಡಿಬಿಡುತ್ತಾರೆ. ತಾಲೂಕಿನ ಶಿಕಾರಿಪುರ ಗ್ರಾಮ ಮತ್ತು ಇತರೆಡೆಗಳಲ್ಲಿ ನೆಲೆಸಿರುವ ಶಿಳ್ಳೇಕ್ಯಾತ ಜನಾಂಗದಲ್ಲಿ ಹೆಚ್ಚು ಬಾಲ್ಯವಿವಾಹ ಮಾಡುವ ಪದ್ದತಿಗಳು ನಡೆಯುತ್ತಿವೆ. ತಡೆಗಟ್ಟಲು ಸಾದ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ಸಾಕಷ್ಟು ಜವಾಬ್ದಾರಿಯಿಂದ ಕೆಲಸಮಾಡುತ್ತಿದೆ. ಆದರೆ, ಚುಂಚನಗಿರಿ ಮಠದಲ್ಲಿ ನಡೆಯುವ ವಿವಾಹಗಳ ಬಗ್ಗೆ ನಿರ್ಮಲಾನಂದನಾಥ ಶ್ರೀಗಳು ಗಮನಹರಿಸಿದರೆ ಸಾಕಷ್ಟು ಬಾಲ್ಯವಿವಾಹ ತಡೆಯಲು ಸಾದ್ಯವಿದೆ. ಮಠದಲ್ಲಿ ಮದುವೆ ನಡೆಯುವ ಸ್ಥಳಗಳಲ್ಲಿ ಜಾಗೃತಿ ಫಲಕ ಮತ್ತು  ಕಾನೂನಿನ ಎಚ್ಚರಿಕೆ ಫಲಕ ಹಾಕುವಂತೆ ಸ್ವಾಮಿಜಿಗಳಿಗೆ ಕೋರಿಕೊಂಡರೆ ಪ್ರಕರಣಗಳನ್ನು ತಡೆಗಟ್ಟಲು ನೆರವಾಗಬಹುದು ಎಂದು ಗ್ರಾಮಾಂತರ ಠಾಣೆ ಎಎಸ್‍ಐ ಶ್ರೀಧರ್ ಸಭೆಗೆ ಮಾಹಿತಿ ನೀಡಿದರು.

ಸಿಸಿಟಿವಿ ವ್ಯವಸ್ಥೆ ಸೇರಿದಂತೆ ಮಠದ ಸಿಬ್ಬಂದಿಗಳು ನಡೆಯುತ್ತಿರುವ ಮದುವೆಗಳ ವಧುವರರ ಬಗ್ಗೆ ಹೆಚ್ಚು ಜಾಗೃತಿ ವ್ಯವಸ್ಥೆ ಕೈಗೊಳ್ಳುವಂತೆ ಚುಂಚಶ್ರೀಗಳಿಗೆ ಕೋರಿಕೊಳ್ಳುವಂತೆ ಸಭೆ ತೀರ್ಮಾನಿಸಿತು.

ಸಭೆಯಲ್ಲಿ ತಾಲೂಕಿನ ಮದುವೆ ಮಂಟಪಗಳ ಮೇಲೆ ಜಾಗೃತಿ ಫಲಕ ಬರೆಸುವಂತೆ ಹಾಗೂ  ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಇತರೆ ಪ್ರಕರಣಗಳಲ್ಲಿ ಗ್ರಾಮ ಪಂಚಾಯುತಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಹಿಸಬೇಕಾಗಿರುವ ಕ್ರಮಗಳ ಬಗ್ಗೆ ತಹಶೀಲ್ದಾರ್ ನಂಜುಂಡಯ್ಯ ಚರ್ಚಿಸಿ ಹಲವು ಸೂಚನೆಗಳನ್ನು ನೀಡಿದರು.

ಸಿಡಿಪಿಓ ರಾಜನ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಪ್ರಕಾಶ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ರಮ್ಯ, ಸುನಿಲ್, ಮಾನಸ, ಶಿಕ್ಷಣ ಇಲಾಖೆಯ ಶಿವಪ್ರಸಾದ್, ಪಟ್ಟಣ ಠಾಣೆ ಎಎಸ್‍ಐ ಗೌರಮ್ಮ, ಗೀತಾ, ಪ್ರಸಾದ್, ಇತರೆ ಎನ್‍ಜಿಓ ಕಾರ್ಯಕರ್ತರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News