ಕಡೂರು: ವೇತನ ವಿಳಂಬ ಆರೋಪ; ವಿಷದ ಬಾಟಲಿ ಪ್ರದರ್ಶಿಸಿ ಗ್ರಾಮ ಸಹಾಯಕರಿಂದ ಪ್ರತಿಭಟನೆ

Update: 2018-07-27 18:13 GMT

ಕಡೂರು, ಜು.27: ಜೂನ್ ತಿಂಗಳ ಸಂಬಳ ನೀಡುವಲ್ಲಿ ವಿಳಂಬ ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಸಹಾಯಕರು ತಾಲೂಕು ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು.

ಸರಕಾರ ನೀಡುವ ಗೌರವಧನದಲ್ಲಿಯೇ ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿರುವ ಗ್ರಾಮ ಸಹಾಯಕರಿಗೆ ಜೂನ್ ತಿಂಗಳಲ್ಲಿ ವೇತನ ಪಾವತಿಸದೇ ತೊಂದರೆಯಾಗಿದ್ದು, ತಮಗೆ ಜೀವನ ನಿರ್ವಹಣೆ ಕಷ್ಟವಾಗಿ ವಿಷ ಸೇವಿಸುವುದೇ ದಾರಿ ಎಂದು ಪ್ರತಿಭಟನಾಕಾರರು ವಿಷದ ಬಾಟಲಿಯನ್ನು ಪ್ರದರ್ಶಿಸಿದರು.

ಗ್ರಾಮ ಸಹಾಯಕರ ಸಂಘದ ಮುಖಂಡ ಕೆಂಬಾಲಯ್ಯ ಮಾತನಾಡಿ, ಗ್ರಾಮ ಸಹಾಯಕರನ್ನು ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ಚುನಾವಣೆ ಕರ್ತವ್ಯಕ್ಕೆ, ಪಡಿತರ ಚೀಟಿ ಮತ್ತಿತರ ಯೊಜನೆಗಳ ಜಾರಿಗೆ ಹಾಗೂ ಕಚೇರಿಗಳಲ್ಲಿ ರಾತ್ರಿ ಪಾಳಿಯ ಕರ್ತವ್ಯಕ್ಕೆ ಅಧಿಕಾರಿಗಳು ನಿಯೋಜಿಸುತ್ತಿರುವುದು ಒತ್ತಡದಲ್ಲಿ ಕಾರ್ಯನಿರ್ವಹಿಸುವಂತಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಶೂದ್ರ ಶ್ರೀನಿವಾಸ್ ಮಾತನಾಡಿ, ಕಂದಾಯ ಇಲಾಖೆಯ ಕಡತ ಕೊಠಡಿಗೆ ಗ್ರಾಮ ಸಹಾಯಕರನ್ನು ಕರ್ತವ್ಯಕ್ಕೆ ತಹಶೀಲ್ದಾರ್ ಭಾಗ್ಯ ಅವರು ನಿರ್ವಹಿಸುವಂತೆ ಸೂಚಿಸಿರುವುದು ಇನ್ನೂ ಹೆಚ್ಚಿನ ಕಾರ್ಯದ ಒತ್ತಡಕ್ಕೆ ಪೂರಕವಾಗಿದೆ. ಸರ್ಕಾರ ಕೊಡುವ ಗೌರವಧನವನ್ನೂ ಅಲಾಟ್‍ಮೆಂಟ್ ಇದ್ದರೂ ಸಂಬಳ ಮಾಡದೇ ತಹಶೀಲ್ದಾರ್ ಅವರು ಸತಾಯಿಸುತ್ತಿದ್ದಾರೆ. ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಗ್ರಾಮ ಸಹಾಯಕರ ಜೂನ್ ತಿಂಗಳ ವೇತನವನ್ನು ಪಾವತಿಸಿದ್ದರೂ ಕಡೂರು ತಾಲೂಕಿನಲ್ಲಿ ಅಧಿಕಾರಿಗಳ ದರ್ಪದ ನಡವಳಿಕೆಯಿಂದ ವೇತನ ದೊರಕದೇ ಸಹಾಯಕರು ನರಳುತ್ತಿದ್ದಾರೆಂದು ದೂರಿದರು. 

ಪ್ರತಿಭಟನೆಯಲ್ಲಿ ಗ್ರಾಮ ಸಹಾಯಕರಾದ ಕೆ. ಶಿವಣ್ಣ, ಚಿಕ್ಕಹನುಮಯ್ಯ, ಕಲ್ಲೇಶಪ್ಪ, ಗೋವಿಂದಪ್ಪ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News