ಚಿಕ್ಕಮಗಳೂರು: ಹಡಪದ ಅಪ್ಪಣ್ಣನವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಲು ಜಿಲ್ಲಾಧಿಕಾರಿ ಕರೆ

Update: 2018-07-27 18:18 GMT

ಚಿಕ್ಕಮಗಳೂರು, ಜು.27: ಸಮಾಜ ಸುಧಾರಕ ಹಡಪದ ಅಪ್ಪಣ್ಣನವರ ತತ್ವಾದರ್ಶಗಳನ್ನು ದಿನನಿತ್ಯ ಸ್ಮರಿಸಿಕೊಳ್ಳುತ್ತ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಶರಣ ಹಡಪದ ಅಪ್ಪಣ್ಣನವರ ಕಾಯಕ ನಿಷ್ಠೆ, ಜೀವನ ನಿಷ್ಠೆ, ಸೇವಾ ನಿಷ್ಠೆಗಳು ಅನುಪಮವಾಗಳಾಗಿದ್ದವು. ಅವರ ಸರಳವಾದ ನೇರ ನುಡಿಗಳ ವಚನಗಳು ಸ್ವಸ್ಥ್ಯ ಸಮಾಜದ ನಿರ್ಮಾಣಕ್ಕೆ ದಾರಿ. ಇವುಗಳನ್ನು ಪ್ರತಿಯೊಬ್ಬರು ಪ್ರತಿನಿತ್ಯ ಸ್ಮರಿಸಿಕೊಳ್ಳುತ್ತ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಹಡಪದ ಅಪ್ಪಣ್ಣನವರು ಹಾಗೂ ಅವರ ಪತ್ನಿ ಲಿಂಗಮ್ಮನವರು 12ನೇ ಶತಮಾನದಲ್ಲಿ ಬಸವಣ್ಣನವರ ಒಡನಾಡಿಗಳಾಗಿ ಸೇವೆ ಸಲ್ಲಿಸಿದ್ದರು ಎಂದ ಅವರು ವಚನ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದರು. 

ಸಾಹಿತಿ ಹೆಚ್.ಶಿವಾನಂದರವರು ಶಿವಶರಣ ಶ್ರೀ ಹಡಪದ ಅಪ್ಪಣ್ಣ ಕುರಿತು ವಿಶೇಷ ಉಪನ್ಯಾಸ ನೀಡಿ ಅಪ್ಪಣ್ಣ ಮಹಾನ್ ಚಿಂತಕನಾಗಿದ್ದು, ಮನುಕುಲಕೆ ನೀಡಿದ ಮೌಲಿಕವಾದ ಸಂದೇಶಗಳು ಸಮಾಜದ ಜನರ ಬೆಳಕಿನ ಕಂಬಗಳಾಗಿವೆ ಎಂದರು. ಅಪ್ಪಣ್ಣ ಬಸವಣ್ಣನವರ ಮಹಾ ಮನೆಯಲ್ಲಿ ತಾಂಬೂಲ ಕೊಡುವ ಕಾಯಕದಲ್ಲಿ ನಿರತರಾಗಿದ್ದರು. ತನ್ನ ಕಾಯಕ ನಿಷ್ಠೆಯ ಅನುಭವದಿಂದಲೇ ಸಾಧಿಸಿದ ಅನುಭವ ಪಥ ಹಿರಿದಾದುದ್ದು ಎಂದರು.

ಬಸವಣ್ಣನವರ ಹಾಗೂ ಅಪ್ಪಣ್ಣನವರ ದೇಹ ಬೇರೆಯಾಗಿದ್ದರೂ ಒಂದೇ ಜೀವ ಎನ್ನುವ ರೀತಿಯಲ್ಲಿ ಇದ್ದರು. ಅಪ್ಪಣ್ಣನವರು 348 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಎಂದರು.

ಉಪವಿಭಾಗಾಧಿಕಾರಿ ಅಮರೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ್, ಮುಖಂಡರಾದ ಕೆ.ಟಿ. ರಾಧಾಕೃಷ್ಣ, ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News