ಸಮಾಜದ ಅಭಿವೃದ್ಧಿಗೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ: ಶಾಸಕ ಅಪ್ಪಚ್ಚು ರಂಜನ್

Update: 2018-07-27 18:25 GMT

ಮಡಿಕೇರಿ ಜು.27: ಹನ್ನೆರಡೆನೇ ಶತಮಾನದ ಅನುಭವ ಮಂಟಪವು ಸಂಸತ್ತಿನಂತೆ ಕಾರ್ಯನಿರ್ವಹಿಸಿ, ಪ್ರಜಾಪ್ರಭುತ್ವದ ಬುನಾದಿಯನ್ನು ಹಾಕಿಕೊಟ್ಟಿತು. ಆ ಸಂದರ್ಭದಲ್ಲಿಯೇ ಹಡಪದ ಅಪ್ಪಣ್ಣನವರು ಬಸವಣ್ಣ ಅವರ ಜೊತೆಗಿದ್ದು, ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.   

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನಸಭಾ ಸಭಾಂಗಣದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಹಡಪದ ಅಪ್ಪಣ್ಣ ಅವರು ಸಮಾಜಕ್ಕೆ ತಮ್ಮದೇ ಆದ ಕೊಡಗೆ ನೀಡಿದ್ದಾರೆ. ಹಡಪದ ಅಪ್ಪಣ್ಣ ಅವರ ಆದರ್ಶ ಹಾಗೂ ಸಮಾಜಮುಖಿ ಕಾರ್ಯಗಳನ್ನು ಸ್ಮರಿಸುವಂತಾಗಬೇಕು ಎಂದು ಅಪ್ಪಚ್ಚುರಂಜನ್ ಅವರು ಕರೆ ನೀಡಿದರು. ಹಡಪದ ಅಪ್ಪಣ್ಣನಂತಹ ಹಲವಾರು ಸಂತ ಶರಣರು ದೇಶಕ್ಕೆ ಹಿರಿಮೆ ತಂದಿದ್ದು, ಭಾರತದ ಸಂಸ್ಕೃತಿ, ಜ್ಞಾನ, ಸಮಾಜ ಸುಧಾರಣೆಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಇಂತಹ ಮಹನೀಯರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಮೈಗೂಡಿಸಿ ಕೊಳ್ಳುವಂತಾಗಬೇಕು ಎಂದರು.   

ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಹಡಪದ ಅಪ್ಪಣ್ಣ ಅವರ ಆದರ್ಶ ನಡೆ ನುಡಿಗಳು, ಅವರ ಕಾಯಕಗಳು ಅಚ್ಚಳಿಯದೆ ಉಳಿದಿವೆ ಎಂದರು. ಹನ್ನೆರಡೆನೇ ಶತಮಾನದಲ್ಲಿ ಬಸವಣ್ಣನವರ ಜೊತೆಯಲ್ಲಿ ಮೊದಲಿನಿಂದ ಕೊನೆಯವರೆಗೆ ಎಡಬಿಡದೆ ಇದ್ದ ಕೀರ್ತಿಯು ಹಡಪದ ಅಪ್ಪಣ್ಣನವರಿಗೆ ಸಲ್ಲುತ್ತದೆ. ಈ ಅಪ್ಪಣ್ಣ ಬಸವಣ್ಣನವರ ಆಪ್ತನಾಗಿ, ಆಪ್ತ ಸೇವಕನಾಗಿ, ಆಪ್ತ ಒಡನಾಡಿಯಾಗಿ, ಆಪ್ತ ಬಂಧುವಾಗಿ, ಕಟ್ಟಕಡೆಯವರೆಗೂ ಮನಃಪೂರ್ವಕವಾದ ಸೇವೆ ಸಲ್ಲಿಸಿದ್ದರು. ಲೌಕಿಕದಲ್ಲಿ ಮಾತ್ರವಲ್ಲ, ಪಾರಮಾರ್ಥದಲ್ಲಿಯೂ ಅಪ್ಪಣ್ಣನವರು ಬಸವಣ್ಣನವರಿಗೆ ತುಂಬಾ ಸಹಾಯಕರಾಗಿದ್ದರು. ಗುರುವಿನ ಜೊತೆಯಲ್ಲಿಯೇ ಐಕ್ಯರಾದ ಇವರು ಜಾತಿ ಪದ್ದತಿ ನಿರ್ಮೂಲನೆಗೆ ಬಸವಣ್ಣನವರ ಜೊತೆಯಲ್ಲಿ ಶ್ರಮಿಸಿದ ಮಹಾನ್ ಪುರುಷ ಹಡಪದ ಅಪ್ಪಣ್ಣ ಎಂದು ಅವರು ನುಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್‍ಕುಮಾರ್ ಮಿಶ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ವೆಂಕಟೇಶ್ ಎಚ್.ಎನ್, ವೃತ್ತ ನಿರೀಕ್ಷಕರಾದ ಐ.ಪಿ ಮೇದಪ್ಪ, ಜಿ.ಪಂ.ಉಪ ಕಾರ್ಯದರ್ಶಿ ಬಾಬು, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಮಣಜೂರು ಮಂಜುನಾಥ್, ಶಂಕ್ರಯ್ಯ ಇತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News