ಉ.ಕ ಗೆ ಅನ್ಯಾಯ ಆಗಲು ಇಲ್ಲಿನ ಜನಪ್ರತಿನಿಧಿಗಳೇ ಕಾರಣ: ಸಭಾಪತಿ ಬಸವರಾಜ ಹೊರಟ್ಟಿ
ಹುಬ್ಬಳ್ಳಿ, ಜು. 28: ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಲು ಇಲ್ಲಿಯ ಜನಪ್ರತಿನಿಧಿಗಳೇ ಕಾರಣ. ಡಾ.ಡಿ.ಎಂ.ನಂಜುಂಡಪ್ಪವರದಿ ಬಂದ ನಂತರವೂ ಆ ಭಾಗದ ಜನರೇ ಮುಖ್ಯಮಂತ್ರಿಯಾಗಿದ್ದರೂ, ಉತ್ತರ ಕರ್ನಾಟಕ ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ ಏಕೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕ ಅಖಂಡ ಆಗಿರಬೇಕು. ಪ್ರತ್ಯೇಕ ರಾಜ್ಯದ ಕೂಗು ಸಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಸಭೆ ಕರೆಯಲು ನಿರ್ಧಾರ ಮಾಡಿದ್ದಾರೆ. ನಾನು ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ್ದೇನೆ ಎಂದರು.
ಸಿಎಂ ಸಭೆಗೆ ಎಲ್ಲ ಮಾಹಿತಿಗಳನ್ನ ತರಲಿ, ಉತ್ತರ ಕರ್ನಾಟಕಕ್ಕೆ ಏನಾದರೂ ನಾನು ಅನ್ಯಾಯ ಮಾಡಿದ್ದರೆ, ಅದನ್ನ ತಕ್ಷಣ ಸರಿ ಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ. ಈ ಸಭೆಗೆ ಹೋರಾಟಗಾರರು ಮತ್ತು ಸ್ವಾಮೀಜಿಗಳೇ ಸಮಯ ಹಾಗೂ ಸ್ಥಳ ನಿಗದಿ ಮಾಡಲಿ ಎಂದು ಹೇಳಿದರು.
ಮುಖ್ಯಮಂತ್ರಿ ಜತೆ ಚರ್ಚೆ ನಂತರ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅನ್ನಿಸಿದರೆ, ಅದನ್ನು ಹೇಗೆ ಸರಿಪಡಿಸಬೇಕು ಮತ್ತು ದೊರೆಯಬಹುದಾದ ಯೋಜನೆಗಳನ್ನು ನಮಗೆ ಬರುವಂತೆ ಒತ್ತಾಯ ಮಾಡಬೇಕು. ಅದನ್ನು ಬಿಟ್ಟು ಪ್ರತ್ಯೇಕ ರಾಜ್ಯದ ಮಾತನಾಡುವುದು ಸಲ್ಲ. ಇದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ ಎಂದು ಹೊರಟ್ಟಿ ತಿಳಿಸಿದರು.
ಹಿಂದುಳಿದ ತಾಲೂಕು ಅಭಿವೃದ್ಧಿಗೆ ಸಂಬಂಧಿಸಿದ ನಂಜುಂಡಪ್ಪ ವರದಿ ಬಂದ ನಂತರ ಉತ್ತರ ಕರ್ನಾಟಕದವರೇ ಅನೇಕರು ಮುಖ್ಯಮಂತ್ರಿ ಆಗಿದ್ದಾರೆ. ಆಗ ಏಕೆ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಲಿಲ್ಲ ಎಂದು ಅವರು, ಉತ್ತರ ಕರ್ನಾಟಕ ಹಿಂದುಳಿಯಲು ಜನಪ್ರತಿನಿಧಿಗಳೆ ಕಾರಣ. ನಾವು ಎಲ್ಲರೂ ಗಟ್ಟಿಯಾಗಿ ಉಳಿದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ನಿರ್ಲಕ್ಷದ ನೆಪದಲ್ಲಿ ಬಂದ್ ಕರೆ ನೀಡಿರುವವರು ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪಟ್ಟಿ ಮಾಡಲಿ. ಅಖಂಡ ಕರ್ನಾಟಕವೇ ಇರಬೇಕು. ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಅವರೊಂದಿಗೆ ಸಮಾಲೋಚನೆ ಮಾಡಲಾಗುವುದು ಎಂದು ಹೇಳಿದರು.