ಶರಣ ಚಳವಳಿಗೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ: ಬಸವರಾಜ ಹೊರಟ್ಟಿ

Update: 2018-07-28 15:28 GMT

ಧಾರವಾಡ, ಜು.28: ಬಸವಣ್ಣನವರ ನೇತೃತ್ವದಲ್ಲಿ ನಡೆದ ಮಹಾನ್ ಸಾಮಾಜಿಕ ಕ್ರಾಂತಿಯಲ್ಲಿ ಶರಣ ಹಡಪದ ಅಪ್ಪಣ್ಣನವರ ಪಾತ್ರ ಮಹತ್ವದ್ದಾಗಿದೆ. ಆ ಇತಿಹಾಸವನ್ನು ಸ್ಮರಿಸಲು ಸರಕಾರದಿಂದಲೆ ಜಯಂತಿ ಆಚರಿಸುತ್ತಿರುವದು ಸಂತಸದ ಸಂಗತಿ. ಇಂತಹ ಮಹಾನ್ ಶರಣರಿಂದಾಗಿ ಇಂದು ಭಾರತ ದೇಶವು ಪರಂಪರಾಗತವಾಗಿ ಜಗತ್ತಿನೆದುರು ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದೆ ಎಂದು ವಿಧಾನಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಲೂರು ವೆಂಕಟರಾವ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಅಷ್ಟೇ ಅಲ್ಲ ಜಗತ್ತಿನಲ್ಲಿ ಬಸವಣ್ಣನವರ ಬಗ್ಗೆ ಓದಿಕೊಂಡವರೆಲ್ಲರಿಗೂ ಹಡಪದ ಅಪ್ಪಣ್ಣ ತಿಳಿದಿದ್ದಾರೆ. ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಶರಣ ಚಳವಳಿಯ ಕೊಡುಗೆ ಅಪಾರವಾದುದು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಹಡಪದ ಅಪ್ಪಣ್ಣ, ಆ ಕಾಲದಲ್ಲಿನ ಪ್ರತಿಯೊಂದು ವಿದ್ಯಮಾನಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಬಸವಣ್ಣನವರ ಎಲ್ಲಾ ಕಾರ್ಯಗಳ ಯಶಸ್ಸಿಗೆ ಹಗಲು ರಾತ್ರಿ ಶ್ರಮಿಸಿದವರಲ್ಲಿ ಅವರೂ ಒಬ್ಬರು ಎಂದು ಅವರು ಹೇಳಿದರು.

ಇಂತಹ ಮಹಾನ್ ವ್ಯಕ್ತಿಗಳು ನಮ್ಮ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಅವರ 243 ವಚನಗಳು ದೊರೆತಿವೆ. ಅವುಗಳ ಮೂಲಕ ಸಮಾಜದ ಅಂಕಡೊಂಕುಗಳನ್ನು ತಿದ್ದಲು ಯತ್ನಿಸಿದರು. ಅಪ್ಪಣ್ಣನವರ ಪತ್ನಿ ಲಿಂಗಮ್ಮನವರೂ 113 ವಚನಗಳನ್ನು ಬರೆದಿದ್ದಾರೆ. ಅವರು ಒಂದು ಸಮಾಜಕ್ಕೆ ಸೀಮಿತರಾದವರಲ್ಲ. ಅವರ ಹೆಸರು ಚಿರಾಯುವಾಗುವಂತಹ ಸಂಘಟನಾತ್ಮಕ, ರಚನಾತ್ಮಕ ಕಾರ್ಯಗಳು ನಡೆಯಬೇಕು. ಹೊಸ ಪೀಳಿಗೆಗೆ ಇಂತಹ ಮಹನೀಯರ ಪರಿಚಯ ಮಾಡಿಕೊಡಬೇಕು ಎಂದು ಬಸವರಾಜ ಹೊರಟ್ಟಿ ಕರೆ ನೀಡಿದರು.

ಹಡಪದ ಅಪ್ಪಣ್ಣನವರ ಜೀವನ ಹಾಗೂ ಸಾಮಾಜಿಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದ ಡಾ.ಬಾಳಣ್ಣ ಶೀಗಿಹಳ್ಳಿ, ಮಹಾನ್ ವ್ಯಕ್ತಿಗಳ ಜಯಂತಿಗಳ ಮೂಲಕ ಸಮಾಜಗಳು ಸಂಘಟಿತವಾಗಲು ಸಹಕಾರಿಯಾಗಿದೆ. ಉಪೇಕ್ಷಿತರಾಗಿದ್ದ, ತಳವರ್ಗದ ಶರಣರ ಕುರಿತು ಅಧ್ಯಯನ ಮಾಡಲು ಜಯಂತ್ಯುತ್ಸವಗಳು ಪ್ರೇರಣೆ ನೀಡುತ್ತವೆ ಎಂದರು.

ಎಲ್ಲರನ್ನೂ ಒಳಗೊಳ್ಳುವಂತಹ ಸಾಮಾಜಿಕ ಚಳವಳಿ ಬಸವಣ್ಣನವರ ನೇತೃತ್ವದಲ್ಲಿ ಆರಂಭವಾದಾಗ ಅವರ ಸಮಕಾಲೀನ ಶರಣರ ಸಂಘಟಿತ ಶಕ್ತಿಯಿತ್ತು. ಬಸವಣ್ಣನವರ ಅಂತರಂಗದ ಶಿಷ್ಯನಾಗಿ ಅಪ್ಪಣ್ಣನವರು ಮಾಡಿದ ನಿಷ್ಠೆಯ ಕಾರ್ಯ ಚರಿತ್ರೆಯಲ್ಲಿ ದಾಖಲಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ತಹಶೀಲ್ದಾರ್ ಪ್ರಕಾಶ ಕುದರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ.ರಂಗಣ್ಣವರ್, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ.ಡಿ.ಡೊಳ್ಳಿನ, ಹಡಪದ ಸಮಾಜದ ಮುಖಂಡರಾದ ರಾಚಪ್ಪ ಹಡಪದ, ವಿ.ಎಂ.ದೊಡ್ಡಮನಿ, ಮಹಾರುದ್ರಪ್ಪಪಡೇಸೂರ, ಈರಣ್ಣ ಚಿಕ್ಕಬೆಳ್ಳಿಕಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News