ಮೈಸೂರಿನಲ್ಲಿ ವೈದ್ಯರ ಮುಷ್ಕರ: ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಮೈಸೂರು,ಜು.28: ರಾಷ್ಟ್ರೀಯ ವೈದ್ಯಕೀಯ ಕಮಿಷನ್ (ಎನ್‍ಎಂಸಿ) ಮಸೂದೆಯನ್ನು ವಿರೋಧಿಸಿ ಇಂದು ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಬಂದ್ ಗೆ ಕರೆ ನೀಡಿದ್ದು, ಮೈಸೂರಿನಲ್ಲಿಯೂ ಕೆಲವು ಖಾಸಗಿ ವೈದ್ಯರು ಬಂದ್ ಗೆ ಬೆಂಬಲ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ (ಒಪಿಡಿ) ಬಂದ್ ಆಗಿತ್ತು. ಇದರಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ರೋಗಿಗಳು ವೈದ್ಯರಿಲ್ಲದೆ ಪರದಾಡುವಂತಾಯಿತು. ಈ ಮೊದಲೇ ದಾಖಲಾದ ರೋಗಿಗಳು, ತುರ್ತು ಚಿಕಿತ್ಸಾ ಘಟಕಗಳು ಹಾಗೂ ಒಳರೋಗಿ ಚಿಕಿತ್ಸಾ ಘಟಕಗಳ ಸೇವೆಗೆ ಯಾವುದೇ ಧಕ್ಕೆ ಬರಲಿಲ್ಲ. ಬೆಳಿಗ್ಗೆ 6 ರಿಂದಲೇ ಪ್ರತಿಭಟನೆ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೂ ಬಂದ್ ನಡೆಯಿತು.
ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ನಡುವೆಯೂ ಐಎಂಎ ಸದಸ್ಯರು ಕಾಯ್ದೆ ಜಾರಿಯಾಗದಂತೆ ಅಪರ ಜಿಲ್ಲಾಧಿಕಾರಿ ಯೋಗೀಶ್ ಅವರಿಗೆ ಮನವಿ ಸಲ್ಲಿಸಿದರು. ಎನ್.ಎಂ.ಸಿ ಕಾಯ್ದೆಯಿಂದ ಖಾಸಗಿ ವೈದ್ಯಕೀಯ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ಈ ಕಾಯ್ದೆ ವೈದ್ಯಕೀಯ ಶಿಕ್ಷಣದ ಮೇಲೂ ಭಾರೀ ಪರಿಣಾಮ ಬೀರಲಿದೆ. ಆದ್ದರಿಂದ ಈ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮೈಸೂರು ಐಎಂಎ ಅಧ್ಯಕ್ಷ ವಿಶ್ವೇಶ್ವರಯ್ಯ ಹೇಳಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ವೇಲೆ ಡಾ.ಎಸ್.ಪಿ.ಯೋಗಣ್ಣ, ಡಾ.ರಾಜನ್ ಸೇರಿದಂತೆ ಹಲವು ವೈದ್ಯರು ಮತ್ತು ಆಸ್ಪತ್ರೆಗಳ ಮಾಲಿಕರು ಉಪಸ್ಥಿತರಿದ್ದರು.