ಕ್ಷೇತ್ರ ಬದಲಾವಣೆ ಬಗ್ಗೆ ಊಹಾಪೋಹದ ಸುದ್ದಿ ಹರಡುವವರು ದೇಶದ್ರೋಹಿಗಳು: ಸದಾನಂದ ಗೌಡ
Update: 2018-07-28 21:13 IST
ಬೆಂಗಳೂರು, ಜು. 28: ‘ಕ್ಷೇತ್ರ ಬದಲಾವಣೆ ಮಾಡಲಿದ್ದಾರೆಂದು ನನ್ನ ವಿರುದ್ಧ ಊಹಾಪೋಹದ ಸುದ್ದಿಗಳನ್ನು ಹರಡುತ್ತಿರುವವರು ದೇಶದ್ರೋಹಿಗಳು’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆಕ್ರೋಶ ಹೊರಹಾಕಿದ್ದಾರೆ.
ಶನಿವಾರ ನಗರದ ಹೊರ ವಲಯದಲ್ಲಿನ ರೆಸಾರ್ಟ್‌ನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಬೆಂಗಳೂರು ಉತ್ತರ ಕ್ಷೇತ್ರದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಹೋಗಲಿದ್ದೇನೆ ಎಂಬ ಸುದ್ದಿಯನ್ನು ಮಾಧ್ಯಮಗಳಿಗೆ ಯಾರು ನೀಡುತ್ತಿದ್ದಾರೋ ಗೊತ್ತಿಲ್ಲ ಎಂದರು.
ನಾನು ಎಲ್ಲಿ ಸ್ಪರ್ಧೆ ಮಾಡಬೇಕೆಂಬುದು ನನ್ನ ಆಯ್ಕೆಯಲ್ಲ. ಅದು ಪಕ್ಷದ ನಿರ್ಧಾರ. ಪಕ್ಷ ಎಲ್ಲಿಂದ ಸ್ಪರ್ಧಿಸಲು ತಿಳಿಸುತ್ತದೋ ಅಲ್ಲಿಂದ ಸ್ಪರ್ಧಿಸುತ್ತೇನೆ. ನೀವು ಸ್ಪರ್ಧಿಸಬಾರದು ಎಂದರೆ ಸ್ಪರ್ಧಿಸುವುದಿಲ್ಲ. ಪಕ್ಷ ಹೇಳಿದಂತೆ ನಾನು ಕೇಳುತ್ತೇನೆ. ಆದರೆ, ಕ್ಷೇತ್ರ ಬದಲಾವಣೆ ಕುರಿತು ಯಾವುದೇ ಚಿಂತನೆ, ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಣೆ ನೀಡಿದರು.