×
Ad

ಶಿವಮೊಗ್ಗ: ದಾಂಡೇಲಿ ವಕೀಲನ ಹತ್ಯೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಧರಣಿ

Update: 2018-07-28 23:00 IST

ಶಿವಮೊಗ್ಗ, ಜು. 28: ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯಲ್ಲಿ ಹಿರಿಯ ವಕೀಲ ಅಜಿತ್‍ನಾಯ್ಕ್ ರ ಹತ್ಯೆ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ, ಬಾರ್ ಅಸೋಸಿಯೇಷನ್ ನೇತೃತ್ವದಲ್ಲಿ ವಕೀಲರು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿದರು. 

ಜನಪರ ಹೋರಾಟಗಾರ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ಅಜಿತ್‍ ನಾಯ್ಕ್ ರವರು ಜು. 27 ರಂದು ರಾತ್ರಿ ಕಚೇರಿಯಿಂದ ಮನೆಗೆ ತೆರಳುವಾಗ, ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದು ವಕೀಲ ಸಮೂಹದಲ್ಲಿ ಭೀತಿ ಉಂಟು ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ವಕೀಲರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆದುಕೊಂಡು ಬರುತ್ತಿವೆ. ಈ ಹಿಂದೆ ಹಲವು ವಕೀಲರು ಕೊಲೆಗೀಡಾಗಿದ್ದಾರೆ. ವಕೀಲರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ತಕ್ಷಣದ ಕ್ರಮಗಳನ್ನು ಹಾಗೂ ಆರೋಪಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಿದ್ದರೆ, ಇಂತಹ ಘಟನೆಗಳು ನಡೆಯುತ್ತಿರಲಿಲ್ಲ.  ತಕ್ಷಣವೇ ವಕೀಲ ಅಜಿತ್‍ನಾಯ್ಕ್ ಹತ್ಯೆಗೆ ಕಾರಣಕರ್ತರಾದ ಆರೋಪಿಗಳನ್ನು ಪತ್ತೆ ಹಚ್ಚಬೇಕು. ಅವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಹಾಗೆಯೇ ವಕೀಲರ ಮೇಲೆ ಹಲ್ಲೆ-ದೌರ್ಜನ್ಯದಂತಹ ಘಟನೆಗಳು ನಡೆಯದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ವಕೀಲರು ನಿರ್ಭೀತಿಯಿಂದ ಕಾರ್ಯನಿರ್ವಹಿಸಲು, ಪ್ರತ್ಯೇಕ ಕಾಯ್ದೆ ರೂಪಿಸಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಮುಖರಾದ ಜಿ.ಮಧು, ಹೆಚ್.ಬಿ.ದೇವೇಂದ್ರಪ್ಪ, ಲಕ್ಷ್ಮೀಕಾಂತ ಚಿಮಣೂರು ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News