×
Ad

ಆ.15 ರೊಳಗೆ ಭೂ ಸರ್ವೇ ಪೂರ್ಣಗೊಳಿಸಿ: ಸಚಿವ ಜಿ.ಟಿ.ದೇವೇಗೌಡ ಸೂಚನೆ

Update: 2018-07-28 23:16 IST

ಮೈಸೂರು,ಜು.28: ಮೈಸೂರು ವಿಮಾನ ನಿಲ್ದಾಣದ ರನ್‍ವೇ ವಿಸ್ತರಣೆ ಮತ್ತು ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲು ಬೇಕಾಗಿರುವ ಅಗತ್ಯ ಭೂಮಿಯನ್ನು ಆ.15 ರೊಳಗೆ ಸರ್ವೆ ಮಾಡಿ ಮುಗಿಸುವಂತೆ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ವಿಮಾನ ನಿಲ್ದಾಣದ ಪ್ರಾಧಿಕಾರ ಸಭೆ ನಡೆಸಿ ಮಾತನಾಡಿದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರಕಾರದಿಂದ ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ರಾಜ್ಯ ಸರಕಾರ ಭೂಮಿಯನ್ನಷ್ಟೇ ನೀಡಬೇಕಿದೆ. ಮೈಸೂರಿನ ಅಭಿವೃದ್ದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಚ್ಚು ಒತ್ತು ನೀಡಿದ್ದು, ಅಧಿಕಾರಿಗಳು ಕೂಡಲೇ ಅಗತ್ಯವಿರುವ 300 ಎಕರೆ ಪ್ರದೇಶವನ್ನು ಸರ್ವೆಮಾಡಿ ಮುಗಿಸಿ ಎಂದು ಹೇಳಿದರು.

ವಿಮಾನ ನಿಲ್ದಾಣದ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಸಿಕ್ಕಿದೆ. ವಿಮಾನ ಹೆದ್ದಾರಿ ಮೇಲೆ ರನ್‍ವೇ ಆದರೆ, ಕೆಳಗಡೆ ವಾಹನಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಸಚಿವರಿಗೆ ವಿವರಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಿ.ಟಿ.ದೇವೇಗೌಡ, ಮೈಸೂರಿಗೆ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಮೈಸೂರಿನಿಂದ ದೇಶದ ಎಲ್ಲಾ ಕಡೆಗಳಿಗೂ ವಿಮಾನದಲ್ಲಿ ಪ್ರಯಾಣ ಮಾಡಲು ಅನುಕೂಲ ಮಾಡಿಕೊಡಬೇಕಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ರನ್‍ವೇ ಪ್ರಾರಂಭಿಸಲು ಮುಂದಾಗಿದೆ. ಅದಕ್ಕೆ ಭೇಕಾಗಿರುವ ಅಗತ್ಯ ಜಾಗವನ್ನು ರಾಜ್ಯ ಸರಕಾರ ಕಲ್ಪಿಸುವುದಾಗಿ ಹೇಳಿದರು.

ಬೆಂಗಳೂರು ಬಿಟ್ಟರೆ ಎರಡನೇ ಅತಿದೊಡ್ಡ ನಗರ ಮೈಸೂರು. ಬೆಂಗಳೂರು ದಿನೇ ದಿನೇ ವಾಹನ ದಟ್ಟಣೆಯಿಂದ ಕೂಡಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆ ಪ್ರಯಾಣ ಬೆಳೆಸಲು ಅರ್ಧ ದಿನ ಕಳೆಯಬೇಕಾಗುತ್ತದೆ. ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ಮೂಲಕ, ರೈಲಿನ ಮೂಲಕ ಬಂದರೆ ಕೇವಲ 2 ಗಂಟೆ ಬೇಕು. ವಿಮಾನದ ಮೂಲಕ ಬಂದರೆ 30 ನಿಮಿಷಗಳ ಕಾಲಾವಾಕಾಶ ಸಾಕು. ಆ ಹಿನ್ನಲೆಯಲ್ಲಿ ಮೈಸೂರಿಗೆ ಹೆಚ್ಚು ಕೈಗಾರಿಕೆಗಳು ಮತ್ತು ಪ್ರವಾಸೋಧ್ಯಮದ ದೃಷ್ಟಿಯಿಂದ ವಿಮಾನ ಪ್ರಯಾಣ ಅಗತ್ಯವಿದೆ. ಅದನ್ನು 2019 ರ ಜನವರಿಗೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಎಕರೆಗೆ 1 ಕೋಟಿ ರೂ.: ಚಾಮುಂಡೇಶ್ವರಿ ಕ್ಷೇತ್ರದ ರೈತರೇ ವಿಮಾನ ನಿಲ್ದಾಣಕ್ಕೆ ಭೂಮಿ ನೀಡುವವರಿಗೆ ಸೂಕ್ತ ಪರಿಹಾರ ನೀಡಬೇಕಿದ್ದು, ಇವತ್ತಿನ ಮಾರ್ಕೆಟ್ ಬೆಲೆಗೆ ಅನುಗುಣವಾಗಿ ಖರೀದಿಸಬೇಕಿದೆ. ಒಂದೊಂದು ಕಡೆಯ ಪ್ರದೇಶಗಳು ಒಂದೊಂದು ದರ ಹೊಂದಿವೆ. ಅದನ್ನೆಲ್ಲ ಪರಿಶೀಲಿಸಿ ಸುಮಾರು 1 ಕೋಟಿ ರೂ. ವರೆಗೆ ಪರಿಹಾರ ನೀಡಬೇಕಾಗುತ್ತದೆ ಎಂದ ಅವರು, ಸುಮಾರು 280 ರಿಂದ 300 ಎಕರೆಗೆ 1 ಸಾವಿರ ಕೋಟಿ ರೂ. ಅಂದಾಜು ಆಗಬಹುದು ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಮೈಸೂರು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವೆಂಕಟಾಚಲಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಪರಿಡೆಂಟೆಂಟ್ ಇಂಜಿನಿಯರ್ ಶ್ರೀಧರಮೂರ್ತಿ, ಕೆ.ಐ.ಡಿ.ಬಿ ವ್ಯವಸ್ಥಾಪಕ ಅರುಳ್ ಕುಮಾರ್, ಇಂಜಿನಿಯರ್‍ಗಳಾದ ಶಿವಲಿಂಗಪ್ಪ, ಅನಂತಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News